ಪ್ಯಾಟಿ ಮಂದಿ ಹಳ್ಳಿ ಲೈಫು : ಸರಕಾರದಿಂದ ಶುರುವಾಗತ್ತೆ ಕೃಷಿ ಟೂರಿಸಂ

ಬೆಂಗಳೂರು: ಕೃಷಿಯನ್ನ ಪರಿಚಯಿಸಲು ಅಗ್ರಿ ಟೂರಿಸಂ ಆರಂಭಿಸಲಾಗುತ್ತಿದೆ. ಕೃಷಿ ಪದ್ಧತಿಯನ್ನ ನಗರ ಪ್ರದೇಶದ ಜನರಿಗೆ ಪರಿಚಯಗೊಳಿಸುವ ನಿಟ್ಟಿನಲ್ಲಿ ಇಂತಹ ಕ್ರಮಕ್ಕೆ ಮುಂದಾಗಿದ್ದೇವೆ. ಪ್ರಾಯೋಗಿಕವಾಗಿ ಎರಡು ಕಡೆ ಆರಂಭ ಮಾಡುತ್ತೇವೆ ಎಂದು ಮೂವರು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ಪ್ರವಾಸೋದ್ಯಮ ಸಚಿವ ಸಿಟಿ ರವಿ, ಕೃಷಿ ಸಚಿವ ಬಿಸಿ ಪಾಟೀಲ್, ತೋಟಗಾರಿಕೆ ಸಚಿವ ನಾರಾಯಣ ಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿ, ಅಗ್ರಿ ಟೂರಿಸಂ ಬಗ್ಗೆ ಮಾಹಿತಿ ನೀಡಿದರು.
ಮೊದಲಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಕೃಷಿ ಅಂದ್ರೇ ಏನು, ಗ್ರಾಮೀಣ ಪರಿಸ್ಥಿತಿ ಹೇಗಿರುತ್ತೆ, ಆಟ, ಊಟೋಪಚಾರದ ಬಗ್ಗೆ ತಿಳುವಳಿಕೆ ನೀಡುವ ಜೊತೆಗೆ ನಾಟಿ ಔಷಧ, ಆಯುರ್ವೇದ ಬಗ್ಗೆ ಪರಿಚಯ ಮಾಡಿಸಲಾಗತ್ತೆ. ಕಾಂಕ್ರೀಟ್ ಕಾಡಿನಲ್ಲಿ ಜಡ್ಡು ಆಗಿರುವವರಿಗೆ ಗ್ರಾಮೀಣ ವ್ಯವಸ್ಥೆ ತಿಳಿಸುವ ಪ್ರಯತ್ನವಿದು. ಅಗ್ರಿ ವಿಲೇಜ್ ಬಗ್ಗೆ ಜನರಿಗೆ ತಿಳಿಸುವುದು. ಇದೊಂದು ರೈತರಿಗೆ ಲಾಭದಾಯಕವಾಗಿ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಮಾರ್ಕೆಟಿಂಗ್ ಹಬ್ ಆಗಿ ಪರಿವರ್ತಿಸಲು ಸಲಹೆ ಬಂದಿವೆ. ನಮ್ಮ ರಾಜ್ಯದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ವ್ಯವಸ್ಥೆ ಇದೆ. ಮೂರು ಇಲಾಖೆಗಳ ಸಹಯೋಗದಲ್ಲಿ ಇದು ಜಾರಿಯಾಗತ್ತೆ. ಕೊವೀಡ್ ಸಂದರ್ಭದಲ್ಲೆ ಇದಕ್ಕೆ ರೂಪುರೇಷೆ ಸಿದ್ದಪಡಿಸಿ, ಮುಂದಿನ ದಿನಗಳಲ್ಲಿ ಅಗ್ರಿ ವಿಲೇಜ್ ಯೋಜನೆ ಪರಿಚಯಿಸಲಾಗುತ್ತದೆ ಎಂದು ಸಿಟಿ ರವಿ ಹೇಳಿದರು.
ಬಿ.ಸಿ.ಪಾಟೀಲ ಮಾತನಾಡಿ, ಪ್ರವಾಸೋದ್ಯಮ ಬಹಳ ಮುಖ್ಯ. ಬಹುತೇಕ ರಾಷ್ಟ್ರಗಳು ಪ್ರವಾಸೋದ್ಯಮದಿಂದಲೇ ಬದುಕಿವೆ. ನಮ್ಮ ದೇಶದಲ್ಲಿ ಶ್ರೀಮಂತ ವ್ಯವಸ್ಥೆ ಇದೆ. ನಮ್ಮ ರಾಜ್ಯದಲ್ಲೂ ಹೇರಳ ಅವಕಾಶ ಇದೆ. ಹೀಗಾಗಿ ಅಗ್ರಿ ಟೂರಿಸಂ ವ್ಯವಸ್ಥೆ ಮಾಡಲು ಯೋಜನೆ ಮಾಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡಲಾಗುತ್ತದೆ. ರೈತನ ಆದಾಯ ಡಬಲ್ ಮಾಡಬೇಕು ಅನ್ನೋದು ಮೋದಿ ಅವರ ಆಶಯ ಆಗಿದೆ. ಅಗ್ರಿ ಟೂರಿಸಂ ಇದಕ್ಕೆ ಪೂರಕವಾಗುತ್ತದೆ ಎಂದು ಪಾಟೀಲ ಹೇಳಿದರು.
ಸಚಿವ ನಾರಾಯಣಗೌಡ ಮಾತನಾಡಿ, ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶ ಇದೆ. ಆದ್ರೆ ಮಾರ್ಕೆಟಿಂಗ್, ಪ್ರಮೋಷನ್ ಇಲ್ಲ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಪ್ರಯತ್ನ ಮಾಡಲಾಗ್ತಿದೆ. ಎಲ್ಲಾ ಇಲಾಖೆಯವರು ಕೈಜೋಡಿಸಿ ಪ್ರವಾಸೋದ್ಯಮ ಮೇಲಕ್ಕೇರಿಸಲಾಗುತ್ತದೆ. ನಮ್ಮ ಕರ್ನಾಟಕದ ಊಟವನ್ನು ಇಡೀ ವಿಶ್ವದಲ್ಲೇ ಮೆಚ್ಚುತ್ತಾರೆ. ಇದನ್ನ ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.