ಕ.ರಾ.ನೌ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರೇ.. ನಿಮಗೆ ದಲಿತ ನೌಕರರೆಂದರೆ ಅಲರ್ಜಿಯೇ…!?
1 min readಬೆಂಗಳೂರು: ಸಂಘದ ಪ್ರಮುಖರನ್ನ ಹೊರತುಪಡಿಸಿ ಕಾರ್ಯಕ್ರಮ ಮಾಡಲು ಮುಂದಾಗಿರುವ ಬಗ್ಗೆ ರಾಜ್ಯದ ದಲಿತ ವರ್ಗದ ನೌಕರರು ನಾಳೆಗೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಆಗಿರುವ ಪ್ರಮಾದದ ಬಗ್ಗೆ ಹರಿದಾಡುತ್ತಿರುವ ಮಾಹಿತಿ..
ಶಿಕ್ಷಣ ಸಂಘಟನೆ ಹೋರಾಟ
ಆತ್ಮೀಯರೇ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಾತಿವಾದಿ ಷಡಕ್ಷರಿಯವರ ದಲಿತ ನೌಕರ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಮಸ್ತ 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಹೆಮ್ಮೆಯ ಸಂಘಟನೆಯಾಗಿದ್ದು ಸದರಿ ಸಂಘಟನೆಯು ಸರ್ಕಾರದಿಂದ ಮಾನ್ಯತೆ ಪಡೆದಿರುತ್ತದೆ,ಕಳೆದು ನೂರು ವರ್ಷಗಳಿಂದ ಸರ್ವ ಧರ್ಮ,ಜಾತಿ, ಜನಾಂಗವನ್ನು ಒಳಗೊಂಡ ಪದಾಧಿಕಾರಿಗಳ ಒಳಗೊಂಡ ಸಂಘವಾಗಿತ್ತು ಸಂಘಟನೆಯ ಈ ಹಿಂದಿನ ನೇತಾರರು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಸರ್ವರ ಆತ್ಮಾಭಿಮಾನಕ್ಕೆ ಗೌರವ ಕೊಡುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
6 ಲಕ್ಷ ಸರಕಾರಿ ನೌಕರರಲ್ಲಿ 1,25000 ಜನ ದಲಿತ ನೌಕರರಿರುತ್ತಾರೆ 2019-24 ರ ಅವಧಿಯ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾಗಿರುವ 552 ಕೇಂದ್ರ ಸಂಘದ ಪ್ರತಿನಿಧಿಗಳಲ್ಲಿ 135 ಜನ ದಲಿತ ಪ್ರತಿನಿಧಿಗಳು ಆಯ್ಕೆಯಾಗಿರುತ್ತಾರೆ, ಪ್ರಸ್ತುತ ಅವಧಿಗೆ ಆಯ್ಕೆಯಾಗಿರುವ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರು ಸಂಘದಲ್ಲಿ ಜಾತೀಯತೆ ಹಾಗೂ ತಾರತಮ್ಯದಿಂದ ನೆಡೆದುಕೊಳ್ಳುತ್ತಾ ದಲಿತರನ್ನು ಅಸ್ಪೃಶ್ಯತೆಯಿಂದ ಕಾಣುತ್ತಾ ಮುಖ್ಯವಾಹಿನಿಯಿಂದ ದೂರ ಇಡುವಂತೆ ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಾ ಬಂದಿರುತ್ತಾರೆ.
ಷಡಕ್ಷರಿಯವರ ದಲಿತ ವಿರೋಧಿ ನೀತಿಗೆ ಪ್ರತೀಕವೆಂಬಂತೆ ಈ ದಿನ ಅಂದರೆ ದಿನಾಂಕ1-7-2021 ರಂದು ನಡೆಯುತ್ತಿರುವ ಶತಮಾನೋತ್ಸವ ಭವನದ ಉದ್ಘಾಟನಾ ಸಮಾರಂಭಕ್ಕೆ ಮುದ್ರಿಸಿರುವ ಆಹ್ವಾನಪತ್ರಿಕೆಯಲ್ಲಿ ನಮ್ಮ ದಲಿತ ನೇತಾರರಾದ ಶ್ರೀ ಶಿವರುದ್ರಯ್ಯ ಇವರು ಸಂಘದ ರಾಜ್ಯ ಗೌರವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ ಅಲ್ಲದೇ ಸದರಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಾಗಿನಿಂದ ಸಂಘದ ಚಟುವಟಿಕೆಗಳಲ್ಲಿ ಶಿವರುದ್ರಯ್ಯ ಅವರು ಸಕ್ರಿಯವಾಗಿದ್ದು ಶತಮಾನೋತ್ಸವ ಭವನ ಕಟ್ಟಡದ ನವೀಕೃತ ಕಾರ್ಯ ಆರಂಭಗೊಂಡ ದಿನದಿಂದ ಇಲ್ಲಿಯವರೆಗೆ ತನು,ಮನ,ಧನದೊಂದಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವುದರ ಜೊತೆಗೆ ರಾಜ್ಯಾದ್ಯಂತ ಸಂಘಟನೆ ಕಟ್ಟುವಲ್ಲಿ ಸಾಕಷ್ಟು ಶ್ರಮ ವಹಿಸಿರುತ್ತಾರೆ,ಆದರೆ ಅವರು ಒಬ್ವ ದಲಿತರು ಎನ್ನುವ ಏಕಮೇವ ಕಾರಣಕ್ಕಾಗಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹಾಗೂ ಶಿಲಾನ್ಯಾಸ ಫಲಕದಲ್ಲಿ ಶಿವರುದ್ರಯ್ಯ ಇವರ ಹೆಸರನ್ನು ಕೈಬಿಟ್ಟಿರುವುದು ರಾಜ್ಯದ ಸಮಸ್ತ ದಲಿತ ನೌಕರರಿಗೆ ಮಾಡಿದ ಘೋರ ಅವಮಾನ ವಾಗಿದೆ,
ಶಿವರುದ್ರಯ್ಯ ಅವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿರಬಾರದು ಎನ್ನುವ ಕಾರಣಕ್ಕಾಗಿ ಇವರನ್ನು ಕಾರ್ಯಕ್ರಮಕ್ಕೆ ಆಹ್ವಾನವನ್ನೇ ನೀಡದೇ ಅಸ್ಪೃಶ್ಯತೆಯನ್ನು ಆಚರಿಸುತ್ತಿರುವುದು ನಮ್ಮ ಸ್ವಾಭಿಮಾನವನ್ನೇ ಕೆಣಕಿದೆ.
ಷಡಕ್ಷರಿಯವರು ಅಧ್ಯಕ್ಷರಾದ ದಿನದಿಂದ ಅಮಾನವೀಯತೆ ಹಾಗೂ ಅಸಮಾನತೆಯ ಕಂದರಕಗಳು ಆಳವಾಗುತ್ತಾ ಹೋಗಿ ಯಜಮಾನಿಕೆಯ ಧೋರಣೆಯೊಂದಿಗೆ ಸರ್ವಾಧಿಕಾರಿ ಮನೋಭಾವ ಹೆಚ್ಚಾಗುತ್ತಿರುವುದು ಸರ್ಕಾರಿ ನೌಕರರ ಸಂಘಟನೆಯ ಘನತೆಗೆ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸುತ್ತಿದೆ.
ಷಡಕ್ಷರಿಯವರ ಸ್ವಂತ ಜಿಲ್ಲೆಯಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಅಲ್ಲಿಯ ನೌಕರರ ಸಂಘದ ಅಧ್ಯಕ್ಷ ಶ್ರೀ ಚಿನ್ನಪ್ಪ ಇವರನ್ನು ಕೇವಲ ದಲಿತ ಎನ್ನುವ ಕಾರಣಕ್ಕಾಗಿ ಇತ್ತೀಚೆಗೆ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಇದರಂತೆಯೇ ರಾಜ್ಯಾದ್ಯಂತ ಅನೇಕ ದಲಿತ,ಹಿಂದುಳಿದ,ಅಲ್ಪಸಂಖ್ಯಾತ ನೌಕರರ ಪ್ರತಿನಿಧಿಗಳು/ ಪದಾಧಿಕಾರಿಗಳಿಗೆ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡಿರುತ್ತಾರೆ.
ಮುಖ್ಯಮಂತ್ರಿಯವರ ಆಪ್ತರು ಎಂದು ನೌಕರರಲ್ಲಿ ಭೀತಿ ಹುಟ್ಟಿಸಿದ ಷಡಾಕ್ಷರಿಯವರ ದಬ್ಬಾಳಿಕೆ ನೀತಿಯನ್ನು ಯಾರಾದರೂ ಪ್ರಶ್ನಿಸಿದರೆ ಅವರನ್ನು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡಿ ಅವರನ್ನು ದಮನ ಮಾಡುತ್ತಾ ಏಕ ವ್ಯಕ್ತಿ ಕೇಂದ್ರಿತ ಸಂಘವನ್ನಾಗಿ ಮಾರ್ಪಾಡಿಸುವ ದಿಕ್ಕಿನತ್ತ ಸಾಗುತ್ತಿದೆ.
ಮುಖ್ಯಮಂತ್ರಿಯವರ ಆಪ್ತರು ಎನ್ನುವ ಅವಕಾಶದ ದುರುಪಯೋಗ ಪಡಿಸಿಕೊಂಡು ನೌಕರರಲ್ಲಿ ಭೀತಿ ಹುಟ್ಟಿಸಿರುವ ಷಡಕ್ಷರಿಯವರು ತಮ್ಮ ದಬ್ಬಾಳಿಕೆ ನೀತಿಯನ್ನು ಪ್ರಶ್ನಿಸಿದ ನೌಕರರು ಯಾರೇ ಆಗಿರಲಿ ಅಮಾನತ್ತು,ವರ್ಗಾವಣೆಯಂಥಹ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಅದರಿಂದ ಭಯಭೀತಗೊಂಡ ಕರ್ನಾಟಕದ ಯಾವುದೇ ನೌಕರರು ಅನ್ಯಾಯದ ವಿರುದ್ದ ಧ್ವನಿ ಎತ್ತಲು ಹಿಂಜರಿಯುತ್ತಿದ್ದಾರೆ.
ಸಾವಿರಾರು ವರ್ಷಗಳಿಂದ ಬೆಳೆದು ಬಂದ ಸೌಹಾರ್ದತೆ,ಸಹಬಾಳ್ವೆ ಸಮಾನತೆಯನ್ನು ಹಾಳು ಮಾಡಿರುವುದಲ್ಲದೇ ನೂರು ವರ್ಷದ ಸರ್ಕಾರಿ ನೌಕರರ ಸಂಘದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡಿ ನೌಕರಲ್ಲಿ ಅನೈಕ್ಯತೆ ಹಾಗೂ ಅಶಾಂತಿಯನ್ನು ಉಂಟು ಮಾಡಿ ದರ್ಪ,ದೌರ್ಜನ್ಯ ಮುಂತಾದ ದಮನಕಾರಿ ನೀತಿಯನ್ನು ಅನುಸರಿಸುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಈ ಕೂಡಲೇ ದಲಿತ ನೌಕರರ ಮುಖಂಡ, ಸಂಘಟನಾ ಚತುರ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಶ್ರೀ ಶಿವರುದ್ರಯ್ಯ ಇವರಿಗೆ ಮಾಡಲಾದ ಅವಮಾನವನ್ನು ಸರಿಪಡಿಸಬೇಕೆಂಬುದು ಆಗ್ರಹಿಸುತ್ತೇವೆ.
ದಲಿತರ ಸ್ವಾಭಿಮಾನ ಸಂರಕ್ಷಿಸಿ ಅವರ ಗೌರವವನ್ನು ಕಾಪಾಡಿ ಸಮಾನ ಅವಕಾಶಗಳನ್ನು ಕಲ್ಪಿಸಿ ಕೊಡುವುದಕ್ಕಾಗಿ ಶಾಂತಿಯುತವಾದ ಈ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ.
slogan..
ದಲಿತರು ಸ್ವಾಭಿಮಾನಿಗಳು ಗುಲಾಮರಲ್ಲ
ಬಲಿಕೊಡುವುದು ಕುರಿ ಕೋಳಿಗಳನ್ನು ಹೊರತು ಹುಲಿ ಸಿಂಹಗಳನ್ನಲ್ಲ
ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್