ತನಿಖಾ ಚಾಣಾಕ್ಷನಿಗೆ ಒಲಿದ ರಾಷ್ಟ್ರಪತಿ ಮೆಡಲ್: ಧಾರವಾಡದ ಕೀರ್ತಿ ಹೆಚ್ಚಿಸಿದ “PI” ಮೊಹ್ಮದರಫೀಕ್ ತಹಶೀಲ್ದಾರ್.”
ಧಾರವಾಡ: ಇಲ್ಲಿನ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮೊಹ್ಮದ್ ರಫೀಕ್ ತಹಶೀಲ್ದಾರ್ ಅವರು ಈ ವರ್ಷದ ಪ್ರತಿಷ್ಠಿತ ‘ರಾಷ್ಟ್ರಪತಿ ಪದಕ’ಕ್ಕೆ ಭಾಜನರಾಗಿದ್ದಾರೆ. ರಾಜ್ಯದ 48 ಅಧಿಕಾರಿಗಳ ಪೈಕಿ ಅತ್ಯಂತ ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಘೋಷಣೆಯಾದ 20 ಅಧಿಕಾರಿಗಳ ಪಟ್ಟಿಯಲ್ಲಿ ಇವರು ಸ್ಥಾನ ಪಡೆದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ರಫೀಕ್ ಅವರು, ಹಿಂದೆ ಹುಬ್ಬಳ್ಳಿಯ ಶಹರ ಠಾಣೆಯಲ್ಲೂ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಜಟಿಲ ಪ್ರಕರಣಗಳನ್ನು ಭೇದಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಇವರು ಚಾಣಾಕ್ಷತನ ಮೆರೆದಿದ್ದಾರೆ. ಸಾರ್ವಜನಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಈ ಸಾಧನೆಯು ಜಿಲ್ಲೆಯ ಪೊಲೀಸ್ ಪಡೆಗೆ ಮಾದರಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
