ಯಾವುದೇ ನೇಮಕಾತಿ ರದ್ದು ಆಗಲ್ಲ: ಆಸ್ಪತ್ರೆಯಿಂದಲೇ ಸಚಿವ ಸುರೇಶಕುಮಾರ ಹೇಳಿದ್ದೇನು ಗೊತ್ತಾ..?
1 min readಬೆಂಗಳೂರು: ಪಿಯು ಉಪನ್ಯಾಸಕರಾಗಿ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಆದರೂ ನೇಮಕಾತಿ ಆದೇಶ ಹಾಗೂ ಯಾವ ಕಾಲೇಜ್ ಹಂಚಿಕೆಯಾಗಿದೆ ಎಂಬುದರ ಆದೇಶದ ಪ್ರತಿಯನ್ನು ಉಪನ್ಯಾಸಕರಿಗೆ ಕೊಟ್ಟಿಲ್ಲ. ತಕ್ಷಣ ಅಲಾಟ್ಮೆಂಟ್ ಲೆಟರ್ ಕೊಡಲು ಆಗ್ರಹಿಸಿ ಭಾವಿ ಉಪನ್ಯಾಸಕರು ನಿನ್ನೆಯಿಂದಲೇ ಅಹೋರಾತ್ರಿ ಧರಣಿಯನ್ನು ಆರಂಭಿಸಿದ್ದು, ಧರಣಿ ನಿರತ ಪಿಯು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಯಿಂದಲೇ ಮಹತ್ವದ ಸಂದೇಶ ಕೊಟ್ಟಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಪಿಯು ಬೋರ್ಡ್ ಎದುರು ಅಹೋರಾತ್ರಿ ನಡೆದ ಧರಣಿಯಲ್ಲಿ ನೂರಾರು ಉಪನ್ಯಾಸಕರು ಭಾಗವಹಿಸಿದ್ದಾರೆ. 1203 ಉಪನ್ಯಾಸಕರಿಗೆ ನೇಮಕಾತಿ ಪ್ರಕ್ರಿಯೆ ಮುಗಿದು ಕೌನ್ಸೆಲಿಂಗ್ ಕೂಡ ಆಗಿದೆ. ಆದರೆ, ಆದೇಶದ ಪ್ರತಿಯನ್ನು ಕೊಡದೇ ಶಿಕ್ಷಣ ಇಲಾಖೆ ವಿಳಂಬ ಮಾಡುತ್ತಿದೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ. ಹೀಗಾಗಿ ಉಪನ್ಯಾಸಕರ ಧರಣಿ ಕುರಿತು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಹತ್ವದ ಆದೇಶ ಕೊಟ್ಟಿದ್ದಾರೆ.
ಪಿಯುಸಿ ಉಪನ್ಯಾಸಕರಾಗಿ ಆಯ್ಕೆಗೊಂಡಿರುವ ಮತ್ತು ಕೌನ್ಸೆಲಿಂಗ್ ಸಹ ಪೂರ್ಣವಾಗಿರುವ ಉಪನ್ಯಾಸಕರು ನೇಮಕಾತಿ ಆದೇಶಕ್ಕಾಗಿ ಧರಣಿ ಕೂತಿರುವ ವಿಚಾರ ನನಗೆ ತಿಳಿದುಬಂದಿದೆ. ನಾನು ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಈ ಮೂಲಕ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸಲು ಇಚ್ಚಿಸುತ್ತೇನೆ. 2019 ಆಗಸ್ಟ್ 21 ರಂದು, ಅಂದರೆ ನಾನು ಪ್ರಮಾಣವಚನ ಸ್ವೀಕರಿಸಿದ ಮಾರನೆಯ ದಿನ ಅಂದರೆ ಇನ್ನೂ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ನನಗೆ ನೀಡುವ ಮುನ್ನವೇ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಾನು 2015ರಿಂದ ವಿಳಂಬವಾಗುತ್ತಿದ್ದ ಈ ಉಪನ್ಯಾಸಕರ ಪರೀಕ್ಷೆ ಫಲಿತಾಂಶವನ್ನು ಪ್ರಕಟ ಮಾಡುವಂತೆ ಕ್ರಮ ತೆಗೆದುಕೊಂಡ ನಂತರ ಈ ವಿಚಾರ ಅನೇಕ ಅಡೆತಡೆಗಳನ್ನು ಎದುರಿಸಿತು. ನನ್ನ ಪ್ರತಿ ಪ್ರಯತ್ನ ಈ ಎಲ್ಲಾ ನೂತನ ಉಪನ್ಯಾಸಕರಿಗೆ ತಿಳಿದಿದೆ. ಆರ್ಥಿಕ ಇಲಾಖೆಯ ನಿರ್ಬಂಧ ಇದ್ದರೂ ಸಹ ಇವರೆಲ್ಲರಿಗೂ ಕೌನ್ಸೆಲಿಂಗ್ ಪ್ರಕ್ರಿಯೆ ಸಹ ಪೂರ್ಣಗೊಳಿಸಲಾಗಿದೆ. ಈಗ ಕಾಲೇಜುಗಳು ಪ್ರಾರಂಭವಾದ ತಕ್ಷಣ ನೇಮಕಾತಿ ಆದೇಶ ಕೊಡಲಾಗುವುದು ಎಂದು ಈ ಎಲ್ಲಾ ನೂತನ ಉಪನ್ಯಾಸಕರುಗಳಿಗೆ ಮುಂಚೆಯೇ ತಿಳಿಸಲಾಗಿತ್ತು.
ಉಪನ್ಯಾಸಕರಾಗಿ ಆಯ್ಕೆಯಾಗಿ ಒಂದು ವರ್ಷದ ಒಳಗೆ ನೇಮಕಾತಿ ಆದೇಶ ದೊರೆಯದಿದ್ದರೆ, ಆ ಆಯ್ಕೆ ಪಟ್ಟಿ ರದ್ದಾಗುತ್ತದೆ ಎಂಬ ಆತಂಕ ಈ ನೂತನ ಉಪನ್ಯಾಸಕರಿಗಿದೆ. ಆದರೆ ಆತಂಕ ನಿಮಗೆ ಬೇಡ. ನೀವು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಉಪನ್ಯಾಸಕರ ಹುದ್ದೆಗಳಿಗೆ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ಬೇಕಾದರೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಉಪನ್ಯಾಸಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆಸ್ಪತ್ರೆಯಿಂದಲೇ ಭರವಸೆ ನೀಡಿದ್ದಾರೆ.