‘POP’ ಗಣೇಶನ ಪ್ರತಿಷ್ಠಾಪನೆ ಧಾರವಾಡ ಜಿಲ್ಲೆಯಲ್ಲಿ ನಿಷೇಧ: ಜಿಲ್ಲಾಧಿಕಾರಿ ಆದೇಶ…
1 min readಪಿಓಪಿ ಗಣಪತಿ ಬೇಡ; ಮಣ್ಣಿನ ಗಣಪತಿ ಪೂಜಿಸಿ; ವಿಗ್ರಹಗಳ ವಿರ್ಜನೆಯಿಂದ ಜಲ ಮೂಲ ಮಲೀನ ಮಾಡಬೇಡಿ; ಭರದ ಛಾಯೆಯಿದೆ ನೀರಿನ ಬಗ್ಗೆ ಎಚ್ಚರವಿರಲಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ: ಜಿಲ್ಲೆಯ ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಿಓಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ನಿಷೇಧಿಸಿದೆ. ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಗಣೇಶೋತ್ಸವದ ನಿಮಿತ್ಯ ಅವಳಿ ನಗರ ಹಾಗೂ ಜಿಲ್ಲೆಯಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸುವ ತಯಾರಕರ, ಮಾರಾಟಗಾರರ, ಪರಿಸರವಾದಿಗಳ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.
ಗಣೇಶ ಚತುರ್ಥಿಯಂದು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಸ್ಥಾಪನೆಗೆ ಸರಕಾರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗದರ್ಶಿಸೂತ್ರಗಳನ್ನು ನೀಡಿದೆ. ಪಿಓಪಿ ಗಣಪತಿ ಮೂರ್ತಿಗಳ ಸ್ಥಾಪನೆಗೆ ಸರ್ಕಾರ 2016 ರಲ್ಲಿ ನಿರ್ಬಂಧಿಸಿ ಆದೇಶಿಸಿದೆ. ಆದೇಶ ಉಲ್ಲಂಘಿಸಿ ಪಿಓಪಿ ಗಣಪತಿ ಸ್ಥಾಪಿಸಿದರೆ ಮತ್ತು ಜಲಮೂಲಗಳಲ್ಲಿ ವಿಸರ್ಜಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ರೂ.10 ಸಾವಿರ ದಂಡ ಮತ್ತು ಜೈಲುವಾಸ ವಿಧಿಸಬಹುದಾಗಿದೆ.
ಪಿಓಪಿ ಗಣೇಶಗಳ ಪ್ರತಿಷ್ಠಾಪನೆ ಬಿಟ್ಟು ಮಣ್ಣಿನ ಗಣಪನ ಪ್ರತಿಷ್ಠಾಪನೆ ಮಾಡಿ ಎಂದು ಕಾಂಗ್ರೆಸ್ ಯುವ ನಾಯಕ ರಜತ ಉಳ್ಳಾಗಡ್ಡಿಮಠ ನಿರಂತರವಾದ ಅಭಿಯಾನ ಮಾಡಿದ್ದನ್ನ ಇಲ್ಲಿ ಸ್ಮರಿಸಬಬಹುದಾಗಿದೆ.
ಅವಳಿ ನಗರ ಹಾಗೂ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಪಿಓಪಿ ಗಣೇಶ ವಿಗ್ರಹಗಳ ದಾಸ್ತಾನು, ಮಾರಾಟ ಕಂಡುಬಂದರೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಹಾಯವಾಣಿ ಹಾಗೂ ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಬಹುದು. ಅಧಿಕಾರಿಗಳ ತಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತದೆ. ಮತ್ತು ದಾಸ್ತಾನು ಹೊಂದಿರುವ ಪಿಓಪಿ ವಿಗ್ರಹಗಳನ್ನು ಜಪ್ತಿ ಮಾಡಿ, ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳನ್ನು ಸ್ಥಾಪಿಸಿ ಹಬ್ಬ ಆಚರಿಸಬೇಕೆಂದು ಜಿಲ್ಲಾಧಿಕಾರಿ ಹೇಳಿದರು.
ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಗಣೇಶ ವಿಗ್ರಹಗಳ ಸಾಗಾಟ ಹಾಗೂ ಮಾರಾಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಪಿಓಪಿ ಗಣೇಶ ವಿಗ್ರಹಗಳು ಜಿಲ್ಲೆಗೆ ಬರದಂತೆ ತಡೆಯಲು ಪೊಲೀಸ್ ಚೇಕ್‍ಪೋಸ್ಟ್‍ಗಳಲ್ಲಿ ನಿರಂತರ ನಿಗಾವಹಿಸಬೇಕೆಂದು ಅವರು ತಿಳಿಸಿದರು. ಮತ್ತು ಗಣೇಶ ವಿಗ್ರಹಗಳ ಸ್ಥಾಪನೆ ಮತ್ತು ವಿಸರ್ಜನೆ ಸಂದರ್ಭದಲ್ಲಿ ವಾಹನಗಳನ್ನು ಪರಿವರ್ತನೆ ಮಾಡದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಗಾವಹಿಸಬೇಕು. ಅನುಮತಿ ಇಲ್ಲದೆ ವಾಹನ ಪರಿವರ್ತನೆ ಮಾಡಿದರೇ ಕಾನೂನು ಪ್ರಕಾರ ಕ್ರಮ ಕೈಗೊಂಡು ವಾಹನ ಜಪ್ತಿ ಮಾಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಸ್ಥಾಪನೆಗೆ ಸಮಿತಿಯವರು ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಸಮಿತಿ ಮೇಲೆ ಇರುತ್ತದೆ. ರಾಸಾಯನಿಕ ಬಣ್ಣ ಬಳಕೆ ಮಾಡಿದ ವಿಗ್ರಹಗಳನ್ನು ಬಳಸಬಾರದು ಮತ್ತು ನಿಗದಿತ ಸ್ಥಳ ಹೊರತುಪಡಿಸಿ ಇತರ ಜಲಮೂಲಗಳಲ್ಲಿ ವಿಗ್ರಹಗಳನ್ನು ವಿಸರ್ಜಿಸಬಾರದು ಎಂದು ಹೇಳಿದರು.
ಜನ, ದನ, ಪ್ರಾಣಿ, ಪಕ್ಷಿಗಳು ಕುಡಿಯುವ ನೀರು ಮತ್ತು ನೀರಿನ ಮೂಲಗಳು ಮಲೀನವಾಗದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ನಾಡಿನಾದ್ಯಾಂತ ಬರದ ಛಾಯೆ ಕಾಣುತ್ತಿರುವದರಿಂದ ಮತ್ತು ನೀರು ಅತ್ಯಮುಲ್ಯವಾಗಿರುವುದರಿಂದ ಪ್ರತಿಯೊಬ್ಬರು ಈ ಕುರಿತು ಕಾಳಜಿ ವಹಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಸ್ಥಾಪನೆಗೆ ಶೀಘ್ರವಾಗಿ ಅನುಮತಿ ಪಡೆಯಲು ಮಹಾನಗರ ಪಾಲಿಕೆ ಹಾಗೂ ನಗರ ಪ್ರದೇಶಗಳಲ್ಲಿ ಏಕಗವಾಕ್ಷಿ (ಸಿಂಗಲ್ ವಿಂಡೋ) ಮೂಲಕ ವ್ಯವಸ್ಥೆ ಕಲ್ಪಿಸಲಾಗುವುದು. ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತಿಗಳು ಗಣೇಶ ವಿಸರ್ಜನೆಯ ಸ್ಥಳಗಳನ್ನು ಗುರುತಿಸಿ, ಮುಂಚಿತವಾಗಿಯೇ ನೋಟಿಪಿಕೇಶನ್ ಮಾಡಬೇಕು. ಗಣೇಶ ವಿಸರ್ಜನೆಯ ದಿನಗಳಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ಮೊಬೈಲ್ ಟ್ಯಾಂಕರ್‍ಗಳ ಸೌಲಭ್ಯ ಕಲ್ಪಿಸಬೇಕು. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ಮೊಬೈಲ್ ಟ್ಯಾಂಕರ್ ಸಂಚರಿಸುವ ಮಾರ್ಗ, ಸ್ಥಳ ಮತ್ತು ಸಮಯವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಗಣೇಶೋತ್ಸವದಲ್ಲಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ಪ್ಲೇಕ್ಸ್ ಹಾಗೂ ಬ್ಯಾನರ್‍ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಬಟ್ಟೆ ಬ್ಯಾನರ್‍ಗಳನ್ನು ಮಾತ್ರ ಬಳಸಬೇಕು. ಸರ್ಕಾರವು ಜುಲೈ 1, 2022 ರಿಂದಲೇ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಿ ಆದೇಶಿಸಿದೆ. ಸಮಿತಿ ಹಾಗೂ ಸಾರ್ವಜನಿಕರು ಬಟ್ಟೆ ಬ್ಯಾನರ್‍ಗಳನ್ನು ಮಾತ್ರ ಬಳಸಬೇಕು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದಲ್ಲಿ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ಆಗಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೊಂದಿಗೆ ಸಭೆ ಜರುಗಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಮನವರಿಕೆ ಮಾಡಿ, ಶಾಂತಿ ಸುವ್ಯವಸ್ಥೆಯಿಂದ ಗಣೇಶೋತ್ಸವ ಆಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
ಮಹಾನಗರ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಮಾತನಾಡಿ, ಗಣೇಶ ಸ್ಥಾಪನೆ ಹಾಗೂ ವಿಸರ್ಜನೆಯ ದಿನಗಳಂದು ಮಾಡುವ ಮೆರವಣಿಗೆಯು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ಮಾರ್ಗದಲ್ಲಿ ಸಂಚರಿಸಬೇಕು. ಮತ್ತು ಗಣೇಶ ವಿಸರ್ಜನೆ ದಿನಗಳಂದು ಸಂಚಾರ ದಟ್ಟನೆಯಾಗದಂತೆ ಕ್ರಮ ವಹಿಸಲಾಗುವುದೆಂದು ಅವರು ಹೇಳಿದರು.
ಗಣೇಶ ಹಬ್ಬವನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸಬೇಕು. ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ. ಪ್ರಮುಖ ಇಲಾಖೆಗಳ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದರಿಂದ ಯಾವುದೇ ರೀತಿಯ ಸಮಸ್ಯ ಕಂಡು ಬಂದಲ್ಲಿ ತಕ್ಷಣ ಪರಿಹರಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಪಿಓಪಿ ಗಣಪತಿ, ಅನಧಿಕೃತವಾಗಿ ಪಟಾಕಿ ಮಾರಾಟ, ಡಿಜೆ ಬಳಕೆ ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಮ್‍ಗೆ ಅಥವಾ ಜಿಲ್ಲಾಡಳಿತ ಸ್ಥಾಪಿಸಿರುವ ಸಹಾಯವಾಣಿಗಳಿಗೆ ಮಾಹಿತಿ ನೀಡಬಹುದೆಂದು ಪೊಲೀಸ್ ಆಯುಕ್ತರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಮಾತನಾಡಿ, ಗಣೇಶೋತ್ಸವ ಆಚರಣೆಗೆ ಈಗಾಗಲೇ ಜಾರಿಯಲ್ಲಿರುವ ನಿಯಮ ಮತ್ತು ಆದೇಶಗಳು ಅನ್ವಯಿಸುತ್ತವೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ನಿಗದಿ ಪಡಿಸಿದ ಡಿಸೆಬಲ್ ಹೊಂದಿರುವ ಧ್ವನಿವರ್ಧಕಗಳನ್ನು ಬಳಸಲು ಅವಕಾಶವಿದೆ. ಡಿಜೆ ಬಳಕೆಗೆ ಅವಕಾಶವಿಲ್ಲ. ಈ ಕುರಿತು ಸಾರ್ವಜನಿಕರು, ಸಮಿತಿಯವರು ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಸಾರ್ವಜನಿಕ ಗಣೇಶ ವಿಗ್ರಹ ಸ್ಥಾಪನೆಗೆ ಏಕಗವಾಕ್ಷಿ ಮೂಲಕ ಅನುಮತಿ ಪಡೆದ ಪತ್ರದ ಪ್ರತಿಯನ್ನು ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಕಳುಹಿಸಬೇಕು. ಗಣೇಶೋತ್ಸವದಲ್ಲಿ ಹಸಿರು ಪಟಾಕಿಗಳ ಬಳಕೆಗೆ ಮಾತ್ರ ಅವಕಾಶವಿದೆ. ಸರ್ಕಾರ ಇದರ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದೆ. ಉತ್ಸವ ಸಮಿತಿಗಳು ಹಸಿರು ಪಟಾಕಿ ಬಳಕೆಗೆ ಪ್ರೋತ್ಸಾಹಿಸಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಅವಳಿ ನಗರದ ಹಾಗೂ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಹಸಿರು ಪಟಾಕಿ ಬಳಕೆಯ ಬಗ್ಗೆ ಹಾಗೂ ಹಸಿರು ಪಟಾಕಿಗಳನ್ನು ಗುರುತಿಸುವ ಬಗ್ಗೆ ಪ್ರಾತ್ಯಕ್ಷಿಕೆ (ಡೆಮೋ) ನೀಡಿ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಅವರು ಹೇಳಿದರು.
ವೇದಿಕೆಯಲ್ಲಿ ಉಪ ಪೊಲೀಸ್ ಆಯುಕ್ತ ರಾಜೀವ ಎಂ. ಮತ್ತು ಉಪವಿಭಾಗಾಧಿಕಾರಿ ಅಶೋಕ ತೇಲಿ ಇದ್ದರು.
ಪಿಓಪಿ ಗಣೇಶ ವಿಗ್ರಹಗಳ ಬಗ್ಗೆ ಮಾಹಿತಿ ಗಣೇಶ ವಿಗ್ರಹಗಳ ಸಾಗಾಣಿಕೆ, ಸಂಗ್ರಹ, ದಾಸ್ಥಾನು, ಮಾರಾಟ ಕಂಡುಬಂದರೆ ಸಾರ್ವಜನಿಕರು ಕರೆ ಮಾಡಿ, ಮಾಹಿತಿ ನೀಡಬಹುದು ಮತ್ತು ವಾಟ್ಸ್‍ಪ್ ಮೂಲಕ ಫೋಟೋ, ಲೋಕೆಶನ್, ಸ್ಥಳದ ವಿವಿರಗಳನ್ನು ಕಳುಹಿಸಬಹುದು. ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾರ್ವಜನಿಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹುಬ್ಬಳ್ಳಿ ಅಧಿಕಾರಿ ಸೋಮಶೇಖರಗೌಡ ಅವರನ್ನು ಮೋ: 9880627265 ಗೆ ಮತ್ತು ಧಾರವಾಡದ ಅಧಿಕಾರಿ ದಿನೇಶ ನಾಯಕ ಅವರನ್ನು ಮೋ: 8197601891 ಗೆ ಸಂಪರ್ಕಿಸಬಹುದು ಮತ್ತು ಪೊಲೀಸ್ ಕಂಟ್ರೋಲ್ ರೂಮ್ 0836-2233555 ಮಹಾನಗರ ಪಾಲಿಕೆಯ ಸಹಾಯವಾಣಿ 0836-2213898, 2213888 ಗೆ ಕರೆ ಮಾಡಿ, ಮಾಹಿತಿ ನೀಡಬಹುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಚಿತ್ರಗಾರ ಸಂಘದ ಅಧ್ಯಕ್ಷ ಗಣೇಶ ಪೊಣಾರಕರ, ಅಶೋಕ ಕಾಂಬಳೆ, ಸತೀಶ ಗುರ್ಲಹೊಸುರ, ನವೀನ ಕಾಂಬಳೆ, ಶಂಕರ ಕುಂಬಿ, ಕಲಾವಿದ ಮಂಜುನಾಥ ಹಿರೇಮಠ ಸೇರಿದಂತೆ ಇತರರು ಮಾತನಾಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಐ.ಎಚ್. ಅವರು ಸ್ವಾಗತಿಸಿ, ಗಣೇಶೋತ್ಸವ ಆಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ, ಭಿಮನಗೌಡ ಪಾಟೀಲ, ಪಾಲಿಕೆಯ ಪರಿಸರ ಅಧಿಕಾರಿ ಸಂತೋಷ ಸೇರಿದಂತೆ ಗಣೇಶ ವಿಗ್ರಹಗಳನ್ನು ತಯಾರಿಸುವ ತಯಾರಕರು, ಮಾರಾಟಗಾರರು, ಪರಿಸರವಾದಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.