ಧಾರವಾಡ ಜಿಲ್ಲೆಯಲ್ಲಿ ಹೊಸ ಡ್ರಾಮಾ: ಮದುವೆ, ಮುಂಜ್ವಿ, ಬರ್ತಡೇ, ಆ್ಯನಿವರ್ಸರಿಗೆ ತಾವೇ ಕರೆಸಿಕೊಳ್ಳುತ್ತಿರೋ ಮರಿ ಫುಡಾರಿಗಳು…!
1 min readಧಾರವಾಡ: ರಾಜಕಾರಣದಲ್ಲಿ ಹೊಸ ಹೊಸ ಮುಖಗಳು ಬರುವ ಸಮಯದಲ್ಲಿ ಹೊಸ ನಾಟಕಗಳನ್ನೂ ತರುತ್ತವೆ ಎಂಬುದನ್ನ ಈಗೀನ ದೃಶ್ಯಗಳು ಸಾಕ್ಷಿಯಾಗಿ ನುಡಿಯುತ್ತಿವೆ. ಇದಕ್ಕೆ ಕಾರಣವಾಗುತ್ತಿರುವುದು ಹತ್ತಿರದಲ್ಲಿ ಬರುತ್ತಿರುವ ಚುನಾವಣೆಗಳು..
ಹೌದು.. ಅವಳಿನಗರವೂ ಸೇರಿದಂತೆ ಕೆಲವು ಕಡೆಗಳಲ್ಲಿ ಮರಿ ರಾಜಕಾರಣಿಗಳೆಂದು ಬಿಂಬಿಸಿಕೊಳ್ಳಲು ಆರಂಭಿಸಿದ್ದಾರೆ. ಅದಕ್ಕೆ ಅವರು ಮಾಡುವ ಕಸರತ್ತು, ತೀರಾ ಕೆಳಮಟ್ಟಕ್ಕೆ ಇಳಿದಿದೆ ಎಂದು ಹೇಳಲಾಗುತ್ತಿದೆ.
ಕೆಲವು ಮರಿ ಫುಡಾರಿಗಳು ತಮ್ಮ ಚೇಲಾಗಳ ಮೂಲಕ ಆಯಾ ಪ್ರದೇಶದಲ್ಲಿ ಇರುವ ಮದುವೆಯೂ ಸೇರಿದಂತೆ ಇನ್ನುಳಿದ ಕಾರ್ಯಕ್ರಮಗಳ ವಿವರವನ್ನ ಪಡೆಯುತ್ತಾರೆ. ಪಡೆದ ಮೇಲೆ, ತಮ್ಮ ಚೇಲಾಗಳ ಮೂಲಕ, ಮದುವೆಯವರ ಮನೆಗೆ ಹೋಗಿ, ‘ಅಣ್ಣಾರಿಗೂ ಕರೀರಿ, ಅವ್ರು ಬರ್ತಾರ್’ ಎಂದು ಹೇಳಿಸಿ, ಮೊಬೈಲ್ ಗೆ ಕಾಲ್ ಬರುವಂತೆ ಮಾಡಿಕೊಳ್ಳುತ್ತಾರೆ.
ಇಷ್ಟಾದ ಮೇಲೆ ಕಾರ್ಯಕ್ರಮಕ್ಕೆ ಬರುವ ಮುನ್ನ 50 ರೂಪಾಯಿಯ ಬೊಕ್ಕೆ ಹಿಡಿದುಕೊಂಡು ಆತನ ಚೇಲಾ ಮೊದಲೇ ನಿಂತಿರುತ್ತಾನೆ. ಮರಿ ರಾಜಕಾರಣಿ ಕಾರ್ಯಕ್ರಮಕ್ಕೆ ಹೋಗಿ, ಅವರಿಗೊಂದು ಬೊಕ್ಕೆ ಕೊಟ್ಟು, ಇವರೊಂದು ಮಾಲೆ ಹಾಕಿಸಿಕೊಂಡು ಮರಳುತ್ತಾರೆ. ಆಗ ಕ್ಲಿಕ್ ಆಗಿರುತ್ತವೆ ಹಲವು ಪೋಟೋಗಳು. ಅವೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಇವರಿಗೂ ಮಂದಿ ಭಾಳ್ ಅದಾರ್ ಎಂದು ಅನಿಸಿಕೊಳ್ಳುವ ಉಮೇದಿಗೆ ಹಲವರು ಬಿದ್ದಿದ್ದಾರೆ.
ಸಾಮಾಜಿಕ ಜಾಲತಾಣವನ್ನೇ ಜ್ಞಾನದ ಭಂಡಾರವೆಂದು ನಂಬಿಕೊಂಡಿರುವ ಕೆಲವರು, ವ್ಹಾಹ್ ಎಂದು ನಮೂದಿಸುತ್ತ ಹೇಳಿಕೊಂಡು ಹೊರಟಿದ್ದಾರೆ. ಇಂಥವರಿಂದ ಸಮಾಜ ಏನೂ ನಿರೀಕ್ಷೆಯಿಟ್ಟುಕೊಳ್ಳಬೇಕೆಂದು ಪ್ರತಿಯೊಬ್ಬ ಪ್ರಜ್ಞಾವಂತರು ವಿಚಾರ ಮಾಡಬೇಕಿದೆ.
ರಾಜಕಾರಣಿಗಳು ಮದುವೆಗೆ ಕರೆಯುವುದು ತೀರಾ ಅಪರೂಪ. ಅವರುಗಳನ್ನ ಕರೆಸಿಕೊಂಡು ‘ದೊಡ್ಡಸ್ತಿಕೆ’ ತೋರಿಸುವ ಕೆಲವರು ಇದ್ದೆ ಇರುತ್ತಾರೆ. ಆದರೆ, ಸಭ್ಯ ರಾಜಕಾರಣಿಗಳು ಹೋಗುವುದೇ ಅಪರೂಪ. ಅಂತಹದರಲ್ಲಿ ಹೊಸ ತಲೆಮಾರಿನ ನಾಟಕ ನೋಡುಗರಲ್ಲಿ ‘ಕಾಮಿಡಿಯನ್’ ಶೋ ಥರ ಕಾಣುತ್ತಿದೆಯಂತೆ.