ಪೊಲೀಸ್ ವ್ಯಾನ್ ಪಲ್ಟಿ- 16 ಸಿಬ್ಬಂದಿ ಪ್ರಾಣಾಪಾಯದಿಂದ ಪಾರು

ಉತ್ತರಕನ್ನಡ: ಕರ್ತವ್ಯದ ನಿಮಿತ್ತವಾಗಿ ಹಾವೇರಿಯಿಂದ ಕಾರವಾರಕ್ಕೆ ಬರುತ್ತಿದ್ದ ಪೊಲೀಸ್ ವಾಹನವೊಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಕುಚಗಾಂವ ಕ್ರಾಸ್ ಬಳಿ ಪಲ್ಟಿಯಾದ ಘಟನೆ ನಡೆದಿದೆ.
ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಬಂದೋಬಸ್ತ ನಿಯೋಜನೆ ಮುಗಿಸಿಕೊಂಡು ಮರಳಿ ಹೋಗುತ್ತಿದ್ದ ಸಮಯದಲ್ಲಿ ಘಟನೆ ನಡೆದಿದ್ದು, ವಾಹನದಲ್ಲಿದ್ದ 16 ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವ್ಯಾನ್ ನಲ್ಲಿ 16 ಸಿಬ್ಬಂದಿಗಳಿದ್ದರು. ಸಾತೋಡ್ಡಿ ಪಾಲ್ಸ್ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ್ದರಿಂದಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ವ್ಯಾನ್ ರಸ್ತೆ ಪಕ್ಕದಲ್ಲೇ ಪಲ್ಟಿಯಾಗಿದೆ. ಇನ್ನೂ ವ್ಯಾನ್ ನಲ್ಲಿದ್ದ 16 ಮಂದಿಗೆ ಗಾಯವಾಗಿದ್ದು ಎಲ್ಲರನ್ನೂ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನವೂ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದು, ಈ ಭಾಗದಲ್ಲಿ ವಿದ್ಯುತ್ ಕೂಡಾ ಇಲ್ಲವಾಗಿದೆ. ಪ್ರಕರಣ ಯಲ್ಲಾಪುರ ಠಾಣೆಯಲ್ಲಿ ದಾಖಲಾಗಿದೆ.