ಹುಬ್ಬಳ್ಳಿ “ಹೆಣ್ಮಗಳ ಹತ್ಯೆ-ಯುವಕನ ಕೊಲೆ” ಕಸಬಾಪೇಟೆಯಲ್ಲಿ “ಪೊಲೀಸ್ ಡ್ರಾಮಾ” ಏನು ಗೊತ್ತಾ…!?
1 min readಹುಬ್ಬಳ್ಳಿ: ನೇಕಾರನಗರದಲ್ಲಿ ತನ್ನ ದೊಡ್ಡಮ್ಮಳ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ಸಿಸಿಬಿಗೆ ವರ್ಗಾವಣೆಯಾಗಿದ್ದ ಕಸಬಾಪೇಟೆ ಇನ್ಸಪೆಕ್ಟರ್, ಮತ್ತೊಂದು ಪ್ರಕರಣದಲ್ಲಿ ಅಮಾನತ್ತು ಆಗಿದೆ ಎಂದುಕೊಂಡು ಲೋ ಬಿಪಿಯಿಂದ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದ್ದು, ಪೊಲೀಸ್ ಇಲಾಖೆಯಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ.
ಕಸಬಾಪೇಟೆ ಪೊಲೀಸ್ ಠಾಣೆಯ ಅಸಲಿ ಕಹಾನಿ ಏನು.. ಯಾಕಿಷ್ಟು ಅದೇ ಠಾಣೆಯಲ್ಲಿ ನಡೆಯುತ್ತಿದೆ. ಅಮಾನತ್ತಿನ ಹಿಂದಿರುವ ಹಲವು ಸಂಶಯಗಳನ್ನ ಕರ್ನಾಟಕವಾಯ್ಸ್.ಕಾಂ ಬಿಚ್ಚಿಡುತ್ತಿದೆ. ಪೂರ್ಣವಾಗಿ ಓದಿ ಇಲಾಖೆಯಲ್ಲಿ ಎಂತೆಂತವರು ಅಧಿಕಾರ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗತ್ತೆ…
ಕಸಬಾಪೇಟೆ ಪೊಲೀಸ್ ಠಾಣೆಗೆ ಇನ್ಸಪೆಕ್ಟರ್ ಅಡಿವೆಪ್ಪ ಬನ್ನಿ ಅಧಿಕಾರ ವಹಿಸಿಕೊಂಡ ಹಲವು ದಿನಗಳವರೆಗೆ ಯಾವುದೇ ಕಿರಿಕಿರಿಗಳು ಇರಲ್ಲಿಲ್ಲ. ಆಮದನಿ ಕೊಡುವುದು ಸ್ವಲ್ಪ ಏರುಪೇರಾಗಿದ್ದರಿಂದ ಓರ್ವ ಶಾಣ್ಯಾ ಮೇಲಾಧಿಕಾರಿ (161 ಅನುಭವಿ) ಹೊಸ ನಾಟಕಗಳನ್ನ ಹೆಣೆದು ಬರೆದು ಬಣ್ಣದಾಟ ಆರಂಭಿಸಿದನು. ಅದೇ ಸಮಯದಲ್ಲಿ ಇನ್ಸಪೆಕ್ಟರ್ ತಪ್ಪು ಮಾಹಿತಿ ನೀಡಿ ತಮ್ಮೂರಿಗೆ ಹೋಗಿದ್ದರು. ಇದೇ ನೆಪದಿಂದ ಅವರನ್ನ ಹಣಿಯುವುದನ್ನ ಶಾಣ್ಯಾ ಮೇಲಾಧಿಕಾರಿ ಹೆಚ್ಚಿಸತೊಡಗಿದ. ಅದು ಯಾವ ಹಂತಕ್ಕೆ ಹೋಯಿತು ಎಂದರೇ ಇನ್ಸಪೆಕ್ಟರ್ ಎಲ್ಲಿ ಹಣ ತಿಂತಾನೆ, ಯಾವ ಆರೋಪಿಗಳ ಜೊತೆ ಏನು ಮಾಡ್ತಾನೆ ಎಂಬುದನ್ನ ಕಲೆ ಹಾಕತೊಡಗಿದ.
ಶಾಣ್ಯಾ ಮೇಲಾಧಿಕಾರಿ ತನಗೊಂದು “ದೊಡ್ಡ ರೋಗ” ಇದೆ ಎಂದು ಸೆಂಟಿಮೆಂಟ್ ಕ್ರಿಯೇಟ್ ಮಾಡಿಕೊಂಡು ಬೆಟ್ಟಿಂಗ್, ಬಡ್ಡಿ ವ್ಯವಹಾರ, ಅಕ್ಕಿ ಕಳ್ಳರಿಂದ “ಕಮೀಷನರ್ ಆಫೀಸ್‌ಗೆ ಅರ್ಜಿ ಬಂದೈತಿ” ಎನ್ನುತ್ತಲೇ 50 ಸಾವಿರದಿಂದ 3 ಲಕ್ಷದ ವರೆಗೆ ಗೀಜತೊಡಗಿದ. ಆ ಥರದ ದಂಧೆಕೋರರು ಇದ್ದಿದ್ದೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಹೀಗಾಗಿ ಅಡಿವೆಪ್ಪ ಬನ್ನಿ ಶಾಣ್ಯಾನಿಂದ ಕಂಗಾಲಾಗತೊಡಗಿದರು.
ಇಷ್ಟೇಲ್ಲ ನಡೆಯುತ್ತಿದ್ದಾಗ ಹಳೇ ಕಟ್ಟಡದಲ್ಲಿ ಪೊಲೀಸ್ ಠಾಣೆಯಿದ್ದಾಗ ಪಳಗಿದ್ದ ಹೆಡ್‌ಕಾನ್ಸಟೇಬಲ್‌ನನ್ನ ಕಲೆಕ್ಷನ್‌ನಿಂದ ಇನ್ಸಪೆಕ್ಟರ್ ಅವರು ಬದಲಾವಣೆ ಮಾಡಿದರು. ಅದೇ ಸಿಟ್ಟಿನಿಂದ ಆತ ಶಾಣ್ಯಾ ಮೇಲಾಧಿಕಾರಿಗೆ ಮಾಹಿತಿದಾರನಾಗಿ ಕೆಲಸ ಮಾಡತೊಡಗಿದ, ಮತ್ತಷ್ಟು ಹಪಾಹಪಿಗಳು ಆರಂಭವಾದವು. ಅಲ್ಲಿಂದ ಶುರುವಾಗಿದ್ದೆ “ಆಪರೇಷನ್ ಅಡಿವೆಪ್ಪ ಬನ್ನಿ ಖೆಡ್ಡಾ” ಕಾರ್ಯಕ್ರಮ.
ನೇಕಾರನಗರದಲ್ಲಿ ಚಿನ್ನ ದೋಚಲು ಹೋಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನ ಹಿಡಿಯಲಾಗಲಿಲ್ಲ ಎಂಬ ಕಾರಣಕ್ಕೆ ಇನ್ಸಪೆಕ್ಟರ್ ಅವರನ್ನ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಕುತಂತ್ರಕ್ಕೆ ಬಲಿಯಾದೇ ಎಂದುಕೊಂಡು ಅಂದೇ ಇನ್ಸಪೆಕ್ಟರ್ ಹುಬ್ಬಳ್ಳಿಯ ರೇಲ್ವೆ ಹಳಿಯ ಸಮೀಪ ಹೋಗುತ್ತಿದ್ದಾಗ ಅವರ ಸಿಬ್ಬಂದಿಗಳಿಗೆ ಗೊತ್ತಾಗಿ, ಧೈರ್ಯ ತುಂಬಿದ್ದರು. ಇವತ್ತು ಸಂತೋಷ ಮುರಗೋಡನ ವಿಷಯವಾಗಿ ಇನ್ಸಪೆಕ್ಟರ್ ಅವರನ್ನ ಅಮಾನತ್ತು ಮಾಡಲಾಗಿದೆಯಂದುಕೊಂಡು ಲೋ ಬಿಪಿಯಾಗಿ ಇನ್ಸಪೆಕ್ಟರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೇ ರೀತಿ ಅಂದು ಠಾಣೆ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಿಸ್ಕಿನ್ (HC-1621) ಕೂಡಾ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಣದ ಹಪಾಹಪಿಗಳು “ಸಾಯುವ ರೋಗ” ಹೊಂದಿರುವ ಸೆಂಟಿಮೆಂಟ್ ಕ್ರಿಯೇಟ್ ಮಾಡಿ ಹಣ ಹೊಡೆಯುತ್ತಿರುವ ಶಾಣ್ಯಾ ಮೇಲಾಧಿಕಾರಿ ಮತ್ತು ಹಳೇ ಕಟ್ಟಡದ ಠಾಣೆಯಲ್ಲಿ ವಸೂಲಿ ಮಾಡುತ್ತಿದ್ದ ಹೆಡ್‌ಕಾನ್ಸಟೇಬಲ್ ಅವರನ್ನ ದಕ್ಷ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ವಿಚಾರಣೆ ಮಾಡಿದರೇ ಸಾಕು, ಇನ್ಸಪೆಕ್ಟರ್ ಸಾಚಾನಾ.. ಶಾಣ್ಯಾ ಮೇಲಾಧಿಕಾರಿ ಶಾಚಾನಾ… ಅಥವಾ ವಸೂಲಿ ಬಿಡಿಸಿದ ತಕ್ಷಣವೇ ಶಾಣ್ಯಾ ಮೇಲಾಧಿಕಾರಿಗೆ ತಪ್ಪು ಮಾಹಿತಿ ನೀಡುತ್ತಿದ್ದ ಹೆಡ್‌ಕಾನ್ಸಟೇಬಲ್ ಶಾಚಾನಾ… ಎಲ್ಲವೂ ಗೊತ್ತಾಗತ್ತೆ..