ಪೊಲೀಸರನ್ನೇ ಸುಸ್ತು ಬೀಳಿಸಿ ಪೊಲೀಸರ್ ಬೈಕನ್ನೇ ಸುಟ್ಟ ಆಸಾಮಿ: ಆರಕ್ಷಕರು ಮಾಡಿದ್ದೇನು ಗೊತ್ತಾ..?
1 min readಗದಗ: ಕಳ್ಳತನ ಮಾಡಿ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ಚೋರನೋರ್ವನನ್ನ ಬೆನ್ನು ಹತ್ತಿದ ಇಬ್ಬರು ಪೊಲೀಸರನ್ನು ಹೊಲದಲ್ಲಿ ಓಡಾಡಿಸಿ ದಣಿಸಿ, ಮುಳ್ಳಿನ ಕಂಟಿ ಹಾರಿ ಬಂದು ಪೊಲೀಸರ ಎರಡು ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾದವನನ್ನ ಮತ್ತೆ ಪೊಲೀಸರು ಹಿಡಿದ ಘಟನೆ ಗದಗ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.
ಪೊಲೀಸರು ಬೈಕ್ ಸುಟ್ಟು ಪರಾರಿಯಾಗಿದ್ದ ಕಿರಾತಕನ ಹೆಸರು ಸಂತೋಷ್ ರುದ್ರಯ್ಯ ಹಿರೇಮಠ. ಈತ ಅಂತಿಂಥ ಅಸಾಮಿಯಲ್ಲ. ಈ ಹಿಂದೆ ಹಲವು ಅಪರಾಧಗಳ ಕಾರಣ ಈತನ ಹೆಸರು ಜಿಲ್ಲೆಯ ಪೊಲೀಸರ ಕಡತದಲ್ಲಿತ್ತು. ಹೀಗಾಗಿಯೇ ಗದಗ ಶಹರ ಠಾಣೆಯ ಇಬ್ಬರು ಪೊಲೀಸರು ಗುರುವಾರ ಈತನನ್ನು ಹುಡುಕಿಕೊಂಡು ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ನಾರಾಯಣಪುರಕ್ಕೆ ಹೋಗಿದ್ದರು. ಪೊಲೀಸರನ್ನು ನೋಡಿದವನೇ ಸಂತೋಷ್ ಹೊಲದೊಳಗೆ ಓಡತೊಡಗಿದ. ಇಬ್ಬರು ಪೊಲೀಸರು ಅವನ ಬೆನ್ನು ಹತ್ತಿದರು. ಹೊಲದಲ್ಲಿ ಪೊಲೀಸರನ್ನು ಓಡಾಡಿಸಿ ಸುಸ್ತು ಮಾಡಿದ ಖತರನಾಕ್ ಸಂತೋಷ್, ಮುಳ್ಳುಕಂಟಿ- ತೆಗ್ಗುದಿನ್ನೆ ಹಾರಿ ರಸ್ತೆಗೆ ಬಂದವನೇ ಅಲ್ಲೇ ನಿಂತಿದ್ದ ಪೊಲೀಸರ ಎರಡೂ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದು, ಎರಡೂ ಬೈಕ್‌ಗಳು ಸುಟ್ಯು ಕರಕಲಾಗಿವೆ.
ಪೊಲೀಸರ ಬೈಕಿಗೇ ಬೆಂಕಿ ಹಾಕಿದ ಈ ಘಟನೆ ಪೊಲೀಸ್ ವಲಯ ಮತ್ತು ಸಾರ್ವಜನಿಕ ವಲಯದಲ್ಲೂ ಆಶ್ಚರ್ಯ ಮೂಡಿಸಿದೆ. ಸುದ್ದಿ ತಿಳಿದ ಗ್ರಾಮೀಣ ಠಾಣೆಯ ಪಿಎಸ್‌ಐ ಎಂ.ಜಿ. ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಂತೋಷನನ್ನ ಅಸಂತೋಷ ಮಾಡಲು ತಡಕಾಡುತ್ತಿದ್ದರು.
ತಮ್ಮದೇ ಬೈಕಿಗೆ ಬೆಂಕಿ ಬಿದ್ದಾಗ ಪೊಲೀಸರು ಸುಮ್ಮನೆ ಹೇಗೆ ಕೂಡುತ್ತಾರೆಯೇ, ಹಾಗಾಗಿಯೇ ಬೇತಾಳದಂತೆ ಬೆನ್ನು ಬಿದ್ದು ಆರೋಪಿಯನ್ನ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.