ಪಿಎಂ ಜೊತೆ “ಚಾಯ್ ಪೇ ಚರ್ಚಾ” ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಚಿವ ಸುರೇಶಕುಮಾರ ಹೇಳಿದ್ದೇನು…!?
1 min readಬೆಂಗಳೂರು: ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಆಯ್ಕೆಯಾಗಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಅಭಿನಂದನೆ ಸಲ್ಲಿಸಿದ್ದಾರೆ. ಹೊಸಕೋಟೆ ತಾಲೂಕಿನ ತಾವರಕೆರೆ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ ಮನೋಜ್ಞನನ್ನು ಸ್ವತಃ ಭೇಟಿ ಮಾಡಿ ಅಭಿನಂದಿಸಿದ ಸುರೇಶ್ ಕುಮಾರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಬೇಕೆಂದು ಸಲಹೆ ನೀಡಿದರು.
ಕೊನೆಯಲ್ಲಿ ಎಲ್ಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಪರೀಕ್ಷೆ, ಶಾಲೆ, ತರಗತಿ, ಪಠ್ಯ, ಆರೋಗ್ಯ ರಕ್ಷಣೆ, ಸಾಂಕ್ರಾಮಿಕ ರೋಗಗಳಿಂದ ದೂರ ಇರುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ ಸಚಿವರು ಪರೀಕ್ಷೆಗೆ ಚೆನ್ನಾಗಿ ಅಭ್ಯಾಸ ಮಾಡಬೇಕೆಂದರು.
ಸುರೇಶ್ ಕುಮಾರ್ ದೂರವಾಣಿ ಕರೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಚಾರಮಕ್ಕಿ ನಾರಾಯಣಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಅನುಷಾ ಕೃಷ್ಣ ಕುಲಾಲ್‌ಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವ ಸುರೇಶ್ ಕುಮಾರ್, ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಿಲು ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯ ಕುಟುಂಬ, ತಂದೆ-ತಾಯಿ ಕುರಿತು ವಿವರ ತಿಳಿದುಕೊಂಡ ಸಚಿವರು ಪ್ರಧಾನಿಯೊಂದಿಗೆ ಸಂವಾದಕ್ಕೆ ಆಯ್ಕೆಯಾಗಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ನೀವು ಮುಂದೆಯೂ ಸಹ ಚೆನ್ನಾಗಿ ಓದಿ ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕೆಂದದರು. ಇಡೀ ರಾಜ್ಯದ ಪರವಾಗಿ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವೆ ಎಂದರು.
ಗುಡಿಸಲಿಗೆ ಭೇಟಿ ನೀಡಿದ ಪ್ರಸಂಗ ಇಬ್ಬರೊಂದಿಗೂ ಮಾತನಾಡುವಾಗ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 98 ಅಂಕ ಪಡೆದ ಯಾದಗಿರಿ ಮೂಲದ ವಲಸೆ ವಿದ್ಯಾರ್ಥಿಯೊಬ್ಬನ ಗುಡಿಸಲಿಗೆ ಭೇಟಿ ನೀಡಿದ ಪ್ರಸಂಗವನ್ನು ವಿವರಿಸಿ ಕಟ್ಟಡ ಕಾರ್ಮಿಕನಾದ ವಿದ್ಯಾರ್ಥಿ ಆ ಸ್ಥಿತಿಯಲ್ಲೂ ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿರುವುದು ಆತನ ಛಲವನ್ನು ಬಿಂಬಿಸಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ತಾನು ಚೆನ್ನಾಗಿ ಓದಬೇಕು ಎಂಬ ಛಲ ಹೊಂದಬೇಕು ಎಂದರು.
ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚಾ ರಾಜ್ಯದ ಇಬ್ಬರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಉಡುಪಿ ವಿದ್ಯಾರ್ಥಿನಿಯ ತಂದೆ ಗಾರೆ ಕೆಲಸಗಾರರಾಗಿದ್ದರೆ, ಮನೋಜ್ ತಂದೆ ಹೂ ವ್ಯಾಪಾರಿಯಾಗಿದ್ದಾರೆ. ಈ ಇಬ್ಬರೂ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯವರು ಹಾಗೆಯೇ ಗ್ರಾಮೀಣ ಪರಿಸರದಿಂದ ಬಂದವರು. ಪ್ರತಿಭೆ ಎಲ್ಲಿದ್ದರೂ ಅರಳುತ್ತದೆ ಎಂಬುದಕ್ಕೆ ಈ ಮಕ್ಕಳೇ ಸಾಕ್ಷಿಯಾಗಿದ್ದಾರೆ. ಈ ಇಬ್ಬರೂ ವಿದ್ಯಾರ್ಥಿಗಳು ನಮ್ಮ ರಾಜ್ಯಕ್ಕೆ ಅಭಿಮಾನ ಮೂಡುವಂತೆ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.