ಧಾರವಾಡ: ನಿಷ್ಕಾಳಜಿ, ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿನ ಪಿಡಿಓ “ಪ್ರವೀಣಕುಮಾರ ಗಣಿ” ಸಸ್ಪೆಂಡ್…!!!
1 min readವಾಂತಿ ಬೇಧಿ ಪ್ರಕರಣ; ಜಿಲ್ಲಾಧಿಕಾರಿ, ಜಿ.ಪಂ ಸಿಇಓ, ಎಸ್ಪಿ ಅವರಿಂದ ಮುತ್ತಗಿ ಗ್ರಾಮ ಭೇಟಿ; ಸಾರ್ವಜನಿಕರ ಆರೋಗ್ಯ ವಿಚಾರಣೆ; ಕರ್ತವ್ಯ ಲೋಪ ಮತ್ತು ನಿಷ್ಕಾಳಜಿ ತೋರಿದ ಪಿಡಿಓ ಪ್ರವೀಣಕುಮಾರ ಗಣಿ ಅಮಾನತ್ತು ಮಾಡಿ, ಆದೇಶ.
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುತಗಿ ಗ್ರಾಮದ ಒಂದು ಬೋರವೇಲ್‍ದಿಂದ ಕಲುಷಿತ ನೀರು ಗ್ರಾಮದ ಮೂರು ಓಣಿಗಳಿಗೆ ಸರಬರಾಜು ಆಗಿರುವದರಿಂದ ಅಲ್ಲಿನ ನಿವಾಸಿಗಳಲ್ಲಿ ವಾಂತಿ ಬೇಧಿ ಉಂಟಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೀಡಿಯೋ…
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಗೋಪಾಲ ಬ್ಯಾಕೋಡ ಅವರು ಮುತ್ತಗಿ ಗ್ರಾಮ, ಕಲಘಟಗಿ ತಾಲೂಕು ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿ, ಸಾರ್ವಜನಿಕರ ಆರೋಗ್ಯ ವಿಚಾರಿಸಿದರು.
ಸಿಇಓ ಅವರು ನೀರು ಸರಬರಾಜು ಮಾಡುವ ಬೋರವೇಲ್ ಸ್ಥಳ, ಓಎಚ್‍ಟಿ ಮತ್ತು ಮುತಗಿ ಗ್ರಾಮದಲ್ಲಿನ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿ, ಅವರ ಯೋಗಕ್ಷೇಮ ತಿಳಿದರು.
ಮುತ್ತಗಿ ಗ್ರಾಮದಲ್ಲಿ ತೆರೆದಿರುವ ತಾತ್ಕಾಲಿಕ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆಗೆ ಬಂದಿರುವ ಮತ್ತು ಅಲ್ಲಿಯೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರನ್ನು ಮಾತನಾಡಿಸಿ, ಆರೋಗ್ಯ ವಿಚಾರಿಸಿದರು.
ಮುತ್ತಗಿ ಪಿಡಿಓ ಪ್ರವೀಣಕುಮಾರ ಗಣಿ ಅಮಾನತ್ತು ಮಾಡಿ, ಸಿಇಓ ಸ್ವರೂಪ ಟಿ.ಕೆ. ಆದೇಶ: ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಕೆರೆಗಳಿಂದ ಗ್ರಾಮಗಳಿಗೆ ಬರುತ್ತಿರುವ ನೀರು ಕಲುಷಿತಗೊಂಡಿರುವುದರಿಂದ, ಮುತ್ತಗಿ ಗ್ರಾಮದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು ಹಾಗೂ ಕುಡಿಯುವ ನೀರಿಗೆ ಕ್ಲೋರಿನೇಷನ್ ಮಾಡಿ ಸ್ವಚ್ಛ ಹಾಗೂ ಶುದ್ಧವಾದ ನೀರನ್ನು ಗ್ರಾಮದ ಸಾರ್ವಜನಿಕರಿಗೆ ಒದಗಿಸಲು ಮುತ್ತಗಿ ಗ್ರಾಮ ಪಂಚಾಯತಿಯ ಪಿಡಿಓ ಆದ ಪ್ರವೀಣಕುಮಾರ ಗಣಿ ಇವರಿಗೆ ದೂರವಾಣಿ ಮುಖಾಂತರ ಸೂಚಿಸಲಾಗಿತ್ತು.
ಶುದ್ಧವಾದ ಕುಡಿಯುವ ನೀರನ್ನು ಗ್ರಾಮ ಪಂಚಾಯತಿಯಿಂದ ಸರಬರಾಜು ಮಾಡದೇ ಇರುವುದರಿಂದ ಕಲುಷಿತ ನೀರನ್ನು ಸೇವಿಸಿ, 44 ಕ್ಕೂ ಹೆಚ್ಚು ಗ್ರಾಮಸ್ಥರು ವಾಂತಿ-ಬೇಧಿಯಿಂದ ಕಲಘಟಗಿ ತಾಲ್ಲೂಕು ಆಸ್ಪತ್ರೆಗೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮ ವಹಿಸದೇ ಇರುವ ಕಾರಣ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷತೆ ವಹಿಸಿದ್ದರಿಂದ ಪಿಡಿಓ ಪ್ರವೀಣಕುಮಾರ ಗಣಿ ಅವರನ್ನು ಅಮಾನತ್ತುಗೊಳಿಸಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಆದೇಶ ಹೊರಡಿಸಿದ್ದಾರೆ.