ಸಂಶಿ “PDO ನಾಗರಾಜ” ಅಮಾನತ್ತಿಗೆ “Minister ಸಂತೋಷ ಲಾಡ್” ಆದೇಶ…
1 min readವಿಪತ್ತು ನಿರ್ವಹಣೆ ಕುರಿತ ಜಿಲ್ಲಾ ಮಟ್ಟದ ಸಭೆ
ಸಂಶಿ ಪಿಡಿಓ ಅಮಾನತ್ತಿಗೆ ಸಚಿವ ಸಂತೋಷ ಲಾಡ್ ಆದೇಶ; ಇಓ, ತಹಶೀಲ್ದಾರರು ತಾಲೂಕು ಸುತ್ತಿ; ಜನರಲ್ಲಿ ಮುನ್ನೆಚ್ಚರಿಕೆ ಮೂಡಿಸಿ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಚಿವರು.
ಧಾರವಾಡ: ಕಳೆದ ಒಂದು ತಿಂಗಳಿಂದ ಅನಧಿಕೃತ ರಜೆ ಉಳಿದಿರುವ ಮತ್ತು ಅತಿವೃಷ್ಟಿ ಸಮಯದಲ್ಲೂ ಸ್ಪಂದಿಸದಿರುವ ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯತ ಪಿಡಿಓ ನಾಗರಾಜ ಗಿಣಿವಾಲ ಅವರನ್ನು ಅಮಾನತ್ತು ಮಾಡಲು ತಕ್ಷಣ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಜಿಲ್ಲಾ ಪಂಚಾಯತ ಸಿಇಓ ಅವರಿಗೆ ಆದೇಶಿಸಿದರು.
ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ 2024 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಪರಿಹಾರಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆ ಸಭೆ ಜರುಗಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ. ಮನೆಗಳು ಹಾನಿಯಾಗಿ ಆಶ್ರಯದ ತೊಂದರೆ ಆಗಿದೆ. ಜನ ಜೀವನ ಅಸ್ತವ್ಯಸ್ತವಾಗುವ ಸಮಯದಲ್ಲಿ ಸ್ಥಳೀಯ ಅಧಿಕಾರಿಗಳು ಖುದ್ದು ಹಾಜರಿದ್ದು, ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಇಂತಹ ಸಮಯದಲ್ಲಿ ಸಂಬಂಧಿಸಿದ ಅಧಿಕಾರಿಗಳು ರಜೆ, ಬೇಜವಾಬ್ದಾರಿತನ, ಕರ್ತವ್ಯ ಲೋಪ ತೊರಿದರೆ ಸರಕಾರ ಸುಮ್ಮನಿರುವದಿಲ್ಲ ಎಂದು ಸಚಿವರು ತಿಳಿಸಿದರು.
ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದೇ, ಅನುಮತಿ ಪಡೆಯದೇ, ಕಳೆದ ಒಂದು ತಿಂಗಳಿAದ ಸಂಶಿ ಗ್ರಾಮ ಪಂಚಾಯತ ಪಿಡಿಓ ಗೈರಾಗಿದ್ದಾರೆ. ಅವರನ್ನು ತಕ್ಷಣ ಅಮಾನತ್ತು ಮಾಡಬೇಕು. ಮತ್ತು ಈ ಕುರಿತು ಜಿಲ್ಲಾ ಪಂಚಾಯತ ಸಿಇಓ ಅವರಿಗೆ ಮಾಹಿತಿ ನೀಡದೆ, ಉದಾಸೀನತೆ ತೋರಿದ ಕುಂದಗೋಳ ತಾಲೂಕು ಪಂಚಾಯತ ಇಓ ಅವರಿಗೂ ಕಾರಣ ಕೇಳಿ ನೋಟಿಸ್ ನೀಡಬೇಕು. ಈ ರೀತಿಯಾಗಿ ಯಾವುದೇ ಹಂತದ ಅಧಿಕಾರಿ ಕರ್ತವ್ಯದಲ್ಲಿ ಉದಾಸೀನತೆ, ಬೇಜವಾಬ್ದಾರಿ ತೊರಿದರೆ ಜಿಲ್ಲಾಧಿಕಾರಿಗಳು ಮತ್ತು ಸಿಇಓ ಅವರು ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವ ಸಂತೋಷ ಲಾಡ್ ಅವರು ಸೂಚನೆ ನೀಡಿದರು.
ಜೂನ್, ಜುಲೈ ತಿಂಗಳ ಮಳೆಯಿಂದ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ಆಗಸ್ಟ್ ತಿಂಗಳಲ್ಲೂ ಅತಿ ಮಳೆ ಆಗುವ ಮುನ್ಸೂಚನೆ ಇದೆ. ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗಿನ ಪ್ರತಿ ಅಧಿಕಾರಿ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ತಹಶೀಲ್ದಾರ ಮತ್ತು ಇಓಗಳು ಜಂಟಿಯಾಗಿ ತಾಲೂಕು ಸುತ್ತಬೇಕು. ಜನರಲ್ಲಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಚಿವರು ತಿಳಿಸಿದರು.
ಹಳೆಯ, ಕಚ್ಚಾ, ಸೋರುವ ಮನೆಗಳ ಸಮೀಕ್ಷೆ ಮಾಡಿ: ಪ್ರತಿ ಗ್ರಾಮ ಮತ್ತು ನಗರದ ವಾರ್ಡಗಳಲ್ಲಿ ಸಂಬAಧಿಸಿದ ಸ್ಥಳೀಯ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ, ಹಳೆಯದಾದ, ಕಚ್ಚಾ ಮತ್ತು ಸೋರುತ್ತಿರುವ ಮನೆಗಳ ಸಮೀಕ್ಷೆ ಮಾಡಿ, ಅಲ್ಲಿ ವಾಸವಿರುವ ಕುಟುಂಬಗಳಿಗೆ ಮುನ್ನೆಚ್ಚರಿಕೆ ನೀಡಬೇಕು. ಅಗತ್ಯವಿದ್ದಲ್ಲಿ ಸಮುದಾಯಭವನ ಅಥವಾ ಇತರ ಕಟ್ಟಡಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚಿನ ಸಮಸ್ಯೆ ಇದ್ದಲ್ಲಿ ಕಾಳಜಿ ಕೇಂದ್ರ ತೆರೆದು ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸಚಿವರು ನಿರ್ದೇಶಿಸಿದರು.
ಬಸ್ ಸಂಚಾರ, ರಸ್ತೆ, ಸೇತುವೆ ಗಮನಿಸಿ: ರಸ್ತೆ ಹಾಗೂ ಸೇತುವೆಗಳ ಬಗ್ಗೆ ಲೋಕೋಪಯೋಗಿ, ಪಂಚಾಯಾತರಾಜ್ ಇಂಜನಿಯರಿAಗ್ ಇಲಾಖೆಗಳು ಹೆಚ್ಚು ಗಮನ ಹರಿಸಬೇಕು. ರಸ್ತೆ ಹಾಳಾಗಿ ಅಥವಾ ಸೇತುವೆ ಶೀಥಿಲವಾಗಿ ಜನರ ಸಂಚಾರಕ್ಕೆ, ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ನಿಗಾವಹಿಸಬೇಕು. ಸಮಸ್ಯೆ ಕಂಡುಬAದಲ್ಲಿ ಲಭ್ಯ ಅನುದಾನ ಬಳಸಿ, ತಕ್ಷಣ ಸಮಸ್ಯೆ ಪರಿಹರಿಸಿ ಎಂದು ಸಚಿವರು ತಿಳಿಸಿದರು.
ಅರಣ್ಯವಾಸಿಗಳಿಗೆ ಪಟ್ಟಾ ನೀಡಿ: ಅನೇಕ ವರ್ಷಗಳಿಂದ ಅರಣ್ಯ ಇಲಾಖೆ ವ್ಯಾಪ್ತಿಯ ಭೂಮಿಯಲ್ಲಿ ಬದುಕುತ್ತಿರುವ ಜನರಿಗೆ, ಅವರ ವಾಸದ ಮನೆಯ ಪಟ್ಟಾ ನೀಡಬೇಕು. ಅಧಿಕಾರಿಗಳು ಈ ಕುರಿತು ಕ್ರಮ ವಹಿಸಿಬೇಕು. ಈ ಕುರಿತು ಈಗಾಗಲೇ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ 128.4 ವಾಡಿಕೆ ಮಳೆ ಇದ್ದು, 139.4 ಮಿ.ಮಿ ರಷ್ಟು ವಾಸ್ತವ ಮಳೆ ಆಗಿದೆ. ಜುಲೈ ತಿಂಗಳಲ್ಲಿ 157.1 ರಷ್ಟು ವಾಡಿಕೆ ಮಳೆ ಇದ್ದು, 201.3 ರಷ್ಟು ವಾಸ್ತವ ಮಳೆ ಆಗಿದೆ. ಜೂನ್, ಜುಲೈ ಸೇರಿ 285.4 ರಷ್ಟು ವಾಡಿಕೆ ಮಳೆ ಇದ್ದು, ಪ್ರಸ್ತುತ 340.84 ಮಿಲಿ ಮಿಟರ್ ವಾಸ್ತವ ಮಳೆ ಆಗಿದೆ ಎಂದು ತಿಳಿಸಿದರು.
ಜನ, ಜಾನುವಾರು, ಮನೆ ಹಾನಿ: ಜೂನ್ 1 ರಿಂದ ಜುಲೈ 30 ರವರೆಗೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ಒಂದು ಜೀವ ಹಾನಿ ಹಾಗೂ 1 ದೊಡ್ಡ ಜಾನುವಾರು ಹಾನಿ ಆಗಿದ್ದು, ನಿಯಮಾನುಸಾರ ತಕ್ಷಣ ಪರಿಹಾರ ವಿತರಿಸಲಾಗಿದೆ. ಅತಿ ಮಳೆಯಿಂದಾಗಿ 10 ಮನೆಗಳು ತೀವ್ರ ತರಹದಲ್ಲಿ ಮತ್ತು 433 ಮನೆಗಳು ಭಾಗಶಃ ಹಾನಿಯಾಗಿವೆ. ವಿಎ, ಪಿಡಿಓ ಮತ್ತು ಇಂಜನಿಯರ ಜಂಟಿಯಾಗಿ ಹಾನಿಯಾದ ಮನೆಗಳ ಸಮೀಕ್ಷೆ ಮಾಡುತ್ತಿದ್ದು, ತಹಶೀಲ್ದಾರರ ಮೂಲಕ ವರದಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಶಾಲೆ, ಅಂಗನವಾಡಿ, ರಸ್ತೆ ದುರಸ್ತಿಗೆ ಕ್ರಮ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇಲ್ಲಿಯವರೆಗೆ ಸುಮಾರು 443 ಕಚ್ಚಾಮನೆಗಳನ್ನು ಗುರುತಿಸಲಾಗಿದ್ದು, ಈ ಪ್ರತಿ ಮನೆಯ ನಿವಾಸಿಗಳಿಗೆ ಮಳೆ ಹಾನಿ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಈಗಾಗಲೆ ಸುಮಾರು 33 ಕುಟುಂಬಗಳು ಬೇರೆ ಕಡೆ ಶಿಫ್ಟ್ ಆಗಿದ್ದಾರೆ ಎಂದು ತಹಶೀಲ್ದಾರಗಳು ವರದಿ ನೀಡಿದ್ದಾರೆ. ಅಗತ್ಯವಿರುವ ಕಡೆ ಕಾಳಜಿ ಕೇಂದ್ರ ತೆರೆಯಲು ಕ್ರಮವಹಿಸಲಾಗಿದೆ. 19 ಶಾಲೆಗಳ 47 ಕೊಠಡಿಗಳು, 46 ಅಂಗನವಾಡಿ ಕೇಂದ್ರಗಳು ಮತ್ತು 20.5 ಕಿ.ಮೀ. ಗ್ರಾಮೀಣ ರಸ್ತೆ, 2.76 ಕಿ.ಮೀ. ಜಿಲ್ಲಾ ಪ್ರಮುಖ ರಸ್ತೆ ಹಾಗೂ 3 ಸೇತುವೆಗಳು ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಯಾಗಿವೆ. ಇವುಗಳ ತುರ್ತು ದುರಸ್ತಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಗ್ರಾಮ ಪಂಚಾಯತ ವಿಪತ್ತು ನಿರ್ವಹಣಾ ಸಮಿತಿ: ಬೆಣ್ಣೆ ಹಳ್ಳ ಮತ್ತು ತುಪ್ಪರಿ ಹಳ್ಳಗಳಿಂದ ಪ್ರವಾಹಕ್ಕೆ ಒಳಗಾಗಬಹುದಾದ ಐದು ತಾಲೂಕುಗಳ 35 ಗ್ರಾಮ ಪಂಚಾಯತಗಳ ವ್ಯಾಪ್ತಿಯ 56 ಗ್ರಾಮಗಳಲ್ಲಿ ಗ್ರಾಮ ಪಂಚಾಯತ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಿ, ಅಗತ್ಯ ರಕ್ಷಣಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳೀಯರ, ಪರಿಣಿತರ ತಂಡಗಳನ್ನು ರಚಿಸಿ, ರಕ್ಷಣಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಮಾತನಾಡಿ, ಎಲ್ಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಥಾನಿಕವಾಗಿದ್ದು, ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿಪತ್ತು ಪರಿಹಾರ ಕಾರ್ಯಗಳ ಮೇಲುಸ್ತುವಾರಿ ಹಾಗೂ ಅಧಿಕಾರಿಗಳ ಮೇಲೆ ನಿರಂತರ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ. ಪಂಚಾಯತ ರಾಜ್ ಇಂಜನಿಯರಿಂಗ್ ವಿಭಾಗದ ಅಭಿಯಂತರರು ರಸ್ತೆ, ಸೇತುವೆ, ಸರಕಾರಿ ಕಟ್ಟಡಗಳ ಕುರಿತು ಜಾಗೃತಿ ವಹಿಸಿದ್ದು, ದುರಸ್ತಿಗೆ ಕ್ರಮವಹಿಸಿದ್ದಾರೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ಸ್ವಾಗತಿಸಿದರು. ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ವಂದಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಎಲ್ಲ ತಹಶೀಲ್ದಾರರು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಇಂಜನಿಯರಗಳು ಭಾಗವಹಿಸಿದ್ದರು.