ಒಂದೇ ದಿನ 7 ಪಿಡಿಓಗಳು ಅಮಾನತ್ತು..!

ಬೀದರ: ವಿವಿಧ ವಸತಿ ಯೋಜನೆಯಲ್ಲಿ ಅನುದಾನ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಒಂದೇ ದಿನ 7 ಪಿಡಿಓಗಳನ್ನ ಅಮಾನತ್ತು ಮಾಡಿ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ ಆದೇಶ ಹೊರಡಿಸಿದ್ದಾರೆ.
ಬೀದರ ಜಿಲ್ಲೆಯ ಬಾಲ್ಕಿ ಪಟ್ಟಣದಲ್ಲಿ ವಿವಿಧ ವಸತಿ ಯೋಜನೆಗಳಡಿ ಅರ್ಹತೆ ಹೊಂದಿಲ್ಲದಿದ್ದರೂ ವಾಮ ಮಾರ್ಗದಿಂದ ಹಲವರಿಗೆ ಮನೆಯನ್ನ ಹಂಚುವಲ್ಲಿ ಪಿಡಿಓಗಳು ಪಾತ್ರ ವಹಿಸಿದ್ದು, ಮೇಲ್ಮೋಟಕ್ಕೆ ಗೊತ್ತಾಗಿರುವುದರಿಂದ ಇಂತಹ ಕ್ರಮವನ್ನ ತೆಗೆದುಕೊಳ್ಳಲಾಗಿದೆ.
ಇಡೀ ಪ್ರಕರಣದಲ್ಲಿ ಸರಕಾರದ 79 ಕೋಟಿ ರೂಪಾಯಿ ಹಣ ದುರ್ಬಳಕೆ ಆಗಿದೆ ಎಂದು ಹೇಳಲಾಗಿದ್ದು, ಇದಕ್ಕಾಗಿ 203 ಫಲಾನುಭವಿಗಳ ಹೆಸರು ಪಟ್ಟಿ ಮಾಡಲಾಗಿದೆ ಎಂಬುದನ್ನ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಬಾಲ್ಕಿ ತಾಲೂಕಿನ ಬಾಳೂರ ಪಂಚಾಯತಿಯ ಸಂಗಮೇಶ ಸಾವಳೆ, ಬೀರಿ(ಬಿ) ಗ್ರಾಮ ಪಂಚಾಯತಿ ಪಿಡಿಓ ಮಲ್ಲೇಶ ಮಾರುತಿ, ಜ್ಯಾಂತಿ ಪಂಚಾಯತಿಯ ಪ್ರಭಾರಿ ಪಿಡಿಓ ರೇವಣಪ್ಪ, ತಳವಾಡ(ಕೆ) ಗ್ರಾಮ ಪಂಚಾಯತಿ ಪ್ರಭಾರಿ ಪಿಡಿಓ ಚಂದ್ರಶೇಖರ ಗಂಗಶೆಟ್ಟಿ, ಮೊರಂಬಿ ಪಂಚಾಯತಿಯ ರೇಖಾ ಬಿ, ವರವಟ್ಟಿ ಪಂಚಾಯತಿಯ ಸಂತೋಷಸ್ವಾಮಿ ಹಾಗೂ ಎಣಕೂರ ಪಂಚಾಯತಿ ಪ್ರಭಾರಿ ಪಿಡಿಓ ಪ್ರವೀಣಕುಮಾರ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.