Exclusive-ವರ್ಗಾವಣೆಯಾಗಿ 15ದಿನ- ರಿಲೀವ್ ಆಗದ ಸಿಬ್ಬಂದಿಗಳು: ಸಿಇಓ ಅವರೇ ಇದು ನಿಮಗೆ ಗೊತ್ತಾ..?

ಧಾರವಾಡ: ಆಡಳಿತ ವ್ಯವಸ್ಥೆಯನ್ನ ಚುರುಕುಗೊಳಿಸುವ ಉದ್ದೇಶದಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನ ವರ್ಗಾವಣೆ ಮಾಡಿ, 15 ದಿನಗಳು ಕಳೆದರೂ ಇಲ್ಲಿಯವರೆಗೆ ರಿಲೀವ್ ಮಾಡದೇ ಇರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಧಾರವಾಡ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು (ಸಿವಿಲ್) ಹಾಗೂ ತಾಂತ್ರಿಕ ಸಹಾಯಕರು (ಅರಣ್ಯ, ಕೃಷಿ, ತೋಟಗಾರಿಕೆ)ಯ ಬರೋಬ್ಬರಿ 39 ಜನರನ್ನ ವರ್ಗಾವಣೆ ಮಾಡಲಾಗಿದೆ.
ದಾವಣಗೆರೆಯ ಬಿ.ಕೆ.ಆರ್.ಸ್ವಾಮಿ ಸೆಕ್ಯುರಿಟಿ ಏಜೆನ್ಸಿಯಿಂದ ಗುತ್ತಿಗೆ ಪಡೆದಿರುವ ಇವರೆಲ್ಲರೂ ಗ್ರಾಮ ಪಂಚಾಯತಿಯ ಅಭಿವೃದ್ಧಿಯ ಕಾರ್ಯದಲ್ಲೂ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಆದರೆ, ಅತಿಯಾದ ದೂರುಗಳ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಇವರನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಆದೇಶ ಹೊರಗೆ ಬಂದು ಈಗಾಗಲೇ 13 ದಿನಗಳು ಕಳೆದಿವೆ. ಇವರೆಲ್ಲರೂ ಅಕ್ಟೋಬರ್ 1ರಂದೇ ವರ್ಗಾವಣೆಯಾದ ಸ್ಥಳಗಳಿಗೆ ಹೋಗಿ ಕಾರ್ಯನಿರ್ವಹಣೆ ಮಾಡಬೇಕಿತ್ತು. ಆದರೆ, ಇಲ್ಲಿಯವರೆಗೆ ಯಾರೂ ಹೋಗಿ ಸೇವೆಗೆ ಹಾಜರಾಗಿಲ್ಲ.
ಕೇವಲ ಕಾಟಾಚಾರಕ್ಕೆ ವರ್ಗಾವಣೆ ಆದೇಶ ಹೊರಡಿಸಿ, ಈಗ ಸುಮ್ಮನೆ ಕೂತಿರುವುದು ಹಲವು ರೀತಿಯಲ್ಲಿ ಸಮಸ್ಯೆಯನ್ನ ಸೃಷ್ಟಿ ಮಾಡಲಿದೆ.