ಮುಜರಾಯಿ ಇಲಾಖೆಯಲ್ಲಿ ಮೊದಲಿಂದಲೂ ಆನ್ ಲೈನ್ ಪೂಜೆ ನಡೆಯತ್ತೆ: ಸಚಿವ ಕೋಟ ಶ್ರೀನಿವಾಸ

ಉಡುಪಿ: ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಆನ್ ಲೈನ್ ಸೇವೆ ಬಗ್ಗೆ ಕೆಲವರು ಆಕ್ಷೇಪ ಮಾಡಿದ್ದಾರೆ. ಆನ್ ಲೈನ್ ಸೇವೆ ನಮ್ಮ ಇಲಾಖೆಯಲ್ಲಿ ಈ ಮೊದಲೇ ಇದೆ. ಈಗ ಮತ್ತಷ್ಟು ದೇವಸ್ಥಾನಗಳನ್ನು ಆನ್ ಲೈನ್ ಸೇವೆಯ ವ್ಯಾಪ್ತಿಗೆ ಇಲಾಖೆ ತರುತ್ತಿದೆ. ಕೊಲ್ಲೂರು ದೇವಸ್ಥಾನದಲ್ಲಿ ಕಳೆದ ವರ್ಷ ಮೂರು ಸಾವಿರ ಆನ್ಲೈನ್ ಸೇವೆಗಳು ಬಂದಿವೆ. ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಆನ್ ಲೈನ್ ಸೇವೆಯಿದೆ. ಕಳೆದ ವರ್ಷ ಈ ಆನ್ ಲೈನ್ ಸೇವೆಯಿಂದ 49.50 ಲಕ್ಷ ರುಪಾಯಿ ಜಮಾ ಆಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ, ಆನ್ ಲೈನ್ ಪೂಜೆಯನ್ನ ಸಮರ್ಥಿಸಿಕೊಂಡರು.
ಲಾಕ್ಡೌನ್ ನಿಂದ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹರಕೆ ಹೊತ್ತ ಭಕ್ತರಿಗೆ ಆನ್ಲೈನ್ ಸೇವೆಯಿಂದ ಅನುಕೂಲವಾಗಲಿದೆ. ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಆನ್ ಲೈನ್ ಆರಂಭಿಸಿದ್ದೇವೆ. ಲಾಕ್ ಡೌನ್ ವರೆಗಾದರೂ ಆನ್ಲೈನ್ ಸೇವೆ ಅಗತ್ಯವಿದೆ. ಭಕ್ತರ ಕೋರಿಕೆ ಹಿನ್ನೆಲೆಯಲ್ಲಿ ಈ ಸೇವೆ ಆರಂಭವಾಗಿದೆ. ದೇವಸ್ಥಾನಗಳಿಗೆ ಬಾಗಿಲು ಹಾಕಿದೆ ಪೂಜೆ ಆಗುತ್ತಿಲ್ಲ ಎಂದು ಸುದ್ದಿಯಾಗುತ್ತಿದೆ. ಎಲ್ಲಾ ದೇವಸ್ಥಾನಗಳಲ್ಲೂ ಸಾಂಪ್ರದಾಯಿಕ ಪೂಜೆ ನಡೆಯುತ್ತದೆ. ತ್ರಿಕಾಲ, ಕಾಲಮಿತಿಯ ಪೂಜೆಗಳು ನಡೆಯುತ್ತಿವೆ. ದೇವಸ್ಥಾನದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ ಎಂದು ಸಚಿವರು ಹೇಳಿದರು.