ಪಾಲಿಕೆ ಮಾಜಿ ಸದಸ್ಯೆಯ ಸಂಬಂಧಿಯ ಶವ ಪತ್ತೆ, ಇನ್ನುಳಿದವರಿಗಾಗಿ ಕಾರ್ಯಾಚರಣೆ ಮುಂದುವರಿಕೆ..
1 min readಹುಬ್ಬಳ್ಳಿ: ತಾಲೂಕಿನ ಕಿರೇಸೂರ ಗ್ರಾಮದ ಬಳಿ ಘಟನೆ ನಡೆದಿದ್ದು, ನಿನ್ನೆ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯೊಳಗೆ ನಡೆದ ದುರಂತದಲ್ಲಿ ನೀರು ಪಾಲಾಗಿದ್ದ ಮೂರು ಯುವಕರ ಪೈಕಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆಯ ಸಂಬಂಧಿಯ ಶವ ದೊರಕಿದ್ದು, ಇನ್ನುಳಿದ ಇಬ್ಬರು ಯುವಕರಿಗಾಗಿ ಹುಡುಕಾಟ ಮುಂದುವರೆದಿದೆ.
ಇಂದು ಬೆಳಿಗ್ಗೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಜೊತೆಗೂಡಿ ಕಾರ್ಯಾಚರಣೆ ಆರಂಭಿಸಿದ್ದು ಗಜಾನನ ರಾಜಶೇಖರ ಎಂಬಾತನ ಶವ ಇದೀಗ ದೊರಕಿದೆ. ಇನ್ನುಳಿದ ಇಬ್ಬರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಘಟನೆಯಲ್ಲಿ ಬದುಕುಳಿದ ನತಾಶಾ ಯುವರಾಜ ಭಂಡಾರಿ 19 ವರ್ಷದ ಯುವತಿಯಾಗಿದ್ದು, ಪಿಯುಸಿ ಸೆಂಕೆಂಡ್ ಇಯರ್ ಮುಗಿಸಿದ್ದು, ಹುಬ್ಬಳ್ಳಿ ವಿದ್ಯಾನಗರ ಸಿಮೆಂಟ್ ಚಾಳ ನಿವಾಸಿಯಾಗಿದ್ದಾರೆ. ಹುಬ್ಬಳ್ಳಿಯ ನವೀನ ಪಾರ್ಕ ಸಾಗರ ಕಾಲೋನಿಯ ಸಲ್ಮಾನ ಸ್ಯಾಮುವೇಲ್ ಪಿಳ್ಳೆ 20 ವರ್ಷದ ಯುವಕನಾಗಿದ್ದು, ವಾಟರ್ ಪ್ರೂಫ್ ಕೆಲಸ ಮಾಡುತ್ತಾನೆ. ಈತನು ಕೂಡಾ ಘಟನೆಯಲ್ಲಿ ಬದುಕುಳಿದಿದ್ದಾನೆ.
ನೀರು ಪಾಲಾದ ಸನ್ನಿ ಜಾನ್ಸನ ಕಲ್ಲಕುಂಟ್ಲಾ 21 ವರ್ಷದ ಯುವಕನಾಗಿದ್ದು ಐಟಿಐ ಮುಗಿಸಿದ್ದಾನೆ. ಅಷ್ಟೇ ಅಲ್ಲ, ಪಾಲಿಕೆಯ ಮಾಜಿ ಸದಸ್ಯ ಸುವರ್ಣ ಕಲ್ಲಕುಂಟ್ಲಾ ಪುತ್ರನಾಗಿದ್ದಾನೆ. ಪೂನಾ ಮೂಲದ 21 ವರ್ಷದ ಗಜಾನನ ಅಲಿಯಾಸ್ ಗಜ್ಜು ರಾಜಶೇಖರ ಬಿಎ ಅಭ್ಯಾಸ ಮಾಡುತ್ತಿದ್ದು, ಈತ ಸನ್ನಿಯ ಅತ್ತೆಯ ಮಗನಾಗಿದ್ದ. ಇದೀಗ ಈತನ ಶವ ದೊರಕಿದೆ. ಹುಬ್ಬಳ್ಳಿ ಗಾಂಧಿವಾಡಾದ ಆರ್ ಜಿಎಸ್ ನಿವಾಸಿ 21 ವರ್ಷದ ಜೋಶಿ ಕ್ಲಮೆಂಟ್ ಜಂಗಮ ಪಿಯುಸಿ ಮುಗಿಸಿದ್ದಾನೆ. ಈತ ಕೂಡಾ ಸನ್ನಿಯ ಸೋದರನಾಗಬೇಕು.
ಎಲ್ಲರೂ ಕೂಡಿಕೊಂಡು ಕಿರೇಸೂರ ಬಳಿ ಹೋದಾಗ ದುರ್ಘಟನೆ ನಡೆದಿತ್ತು. ಹುಬ್ಬಳ್ಳಿ ಗ್ರಾಮೀಣ ಠಾಣೆ ಹಾಗೂ ನವಲಗುಂದ ಠಾಣೆ ಪೊಲೀಸರು ಜೊತೆಗೆ ಕಿರೇಸೂರ ಗ್ರಾಮಸ್ಥರು ಕಾರ್ಯಾಚರಣೆಗೆ ಸಹಾಯ ಮಾಡುತ್ತಿದ್ದರು. ಇದೀಗ ಬಸಾಪೂರ ಗ್ರಾಮದ ಬಳಿ ಶವವೊಂದು ದೊರಕಿದ್ದು, ಇನ್ನುಳಿದವರಿಗಾಗಿ ಹುಡುಕಾಟ ಮುಂದುವರೆದಿದೆ.