ಹತ್ತಿ ಖರೀದಿ ಮಾಡದ ಅಧಿಕಾರಿಗಳು: ಕಚೇರಿಯಲ್ಲೇ ಕೂಡಿ ಹಾಕಿದ ರೈತರು
1 min readಹುಬ್ಬಳ್ಳಿ: ರೈತರ ಹತ್ತಿಯನ್ನು ಖರೀದಿ ಮಾಡದೇ ಸತಾಯಿಸುತ್ತಿದ್ದಾರೆಂದು ಬೇಸರಗೊಂಡ ಮೂವತ್ತಕ್ಕೂ ಹೆಚ್ಚು ರೈತರು ಕರ್ನಾಟಕ ಕಾಟನ್ ಕಾರ್ಪೋರೇಷನ್ ಆಪ್ ಇಂಡಿಯಾದ ಅಧಿಕಾರಿಗಳನ್ನ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಕಚೇರಿಯಲ್ಲಿ ಕೂಡಿಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ.
ನವಲಗುಂದ ಹಾಗೂ ಕುಂದಗೋಳದಿಂದ ಟ್ರ್ಯಾಕ್ಟರನಲ್ಲಿ ಹತ್ತಿಯನ್ನ ತುಂಬಿಕೊಂಡು ಬಂದಿರುವ ರೈತರು, ನಿನ್ನೆ ರಾತ್ರಿಯಿಂದಲೂ ಖರೀದಿ ಮಾಡುತ್ತಾರೆಂದು ಕಾಯುತ್ತಿದ್ದರು. ಆದರೆ, ಇದೀಗ ಖರೀದಿ ಮಾಡುವುದಿಲ್ಲವೆಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು, ಸೂಪರ್‌ವೈಜರಗಳಾದ ಪ್ರಸಾದ ಮತ್ತು ಪ್ರಕಾಶ ಎಂಬುವವರನ್ನ ಕಚೇರಿಯಲ್ಲಿ ಕೂಡಿಹಾಕಿ ಬೀಗ ಜಡಿದಿದ್ದಾರೆ.
ಒಂದು ಟ್ರ್ಯಾಕ್ಟರನಲ್ಲಿ ಸುಮಾರು ಮೂವತ್ತು ಕ್ವಿಂಟಾಲ್ ಹತ್ತಿಯಿದ್ದು, ಅಂದಾಜು ಮೂವತೈದು ಟ್ರ್ಯಾಕ್ಟರಗಳಲ್ಲಿ ಹತ್ತಿ ತುಂಬಿದೆ. ಬೆಂಬಲ ಬೆಲೆ ಸಿಗುವ ಉದ್ದೇಶದಿಂದ ಬಂದಿರುವ ರೈತರಿಗೆ ಅಧಿಕಾರಿಗಳ ಬೇಜವಾಬ್ದಾರಿತನ ಭ್ರಮನಿರಸನ ಮೂಡಿಸಿದ್ದು, ಖರೀದಿ ಮಾಡಿಕೊಳ್ಳುವವರೆಗೂ ಬಿಡೋದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳು ಹೊರಗೆ ಹೋಗದಂತೆಯೂ ವಾಹನಗಳನ್ನ ಅಡ್ಡ ಹಾಕಿರುವ ರೈತರ ಗೋಳಿಗೆ ಅಧಿಕಾರಿಗಳು ಸ್ಪಂಧಿಸುತ್ತಾರಾ ಅಥವಾ ಇಲ್ಲವೋ ಎಂಬುದನ್ನ ಕಾದು ನೋಡಬೇಕಾಗಿದೆ. ತಾರಿಹಾಳದ ಕಚೇರಿಯಲ್ಲಿ ಗೊಂದಲ ಉಂಟಾಗಿದೆ.