Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ‘ಓಬವ್ವ ಆತ್ಮರಕ್ಷಣಾ ತರಬೇತಿ’- ಜಿಲ್ಲಾಧಿಕಾರಿ ನಿತೇಶ ಪಾಟೀಲ …!

1 min read
Spread the love

ಧಾರವಾಡ: ವಿದ್ಯಾರ್ಥಿನಿಯರಲ್ಲಿ ಆತ್ಮ ವಿಶ್ವಾಸ ತುಂಬಿ ಧೈರ್ಯ ಸ್ಥೈರ್ಯದಿಂದ ಬದುಕಲು ರಾಜ್ಯ ಸರ್ಕಾರವು ಓಬವ್ವ ಆತ್ಮ ರಕ್ಷಣಾ ಕಲೆಯ ತರಬೇತಿ ಯೋಜನೆಯನ್ನು ರಾಜ್ಯಾಧ್ಯಂತ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ವಿವಿಧ ವಸತಿ ನಿಲಯದಲ್ಲಿನ 4472 ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಅವರು ಇಂದು ಮಧ್ಯಾಹ್ನ  ಕವಿವಿಯ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಓಬವ್ವ ಆತ್ಮ ರಕ್ಷಣಾ ಕಲೆ  ತರಬೇತಿ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕಲೆಯನ್ನು ಕಲಿಸುವ  ಯೋಜನೆ ಇದ್ದಾಗಿದ್ದು, ತರಬೇತಿ ನೀಡಲಾಗುತ್ತಿದೆ ಎಂದರು.

ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿಯು 6 ತಿಂಗಳದ್ದಾಗಿದ್ದು , 48 ಭೋಧನಾ ಅವಧಿಯನ್ನು ಹೊಂದಿದೆ. ತರಬೇತಿದಾರರಿಂದ ಪ್ರತಿದಿನ ತರಬೇತಿಯನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವಸತಿ ನಿಲಯ ಹಾಗೂ ವಸತಿ ಶಾಲೆ ಮತ್ತು ಭವನಗಳಿಗೆ ಅಗತ್ಯ ನಿವೇಶನ ಮಂಜೂರು ಮಾಡಲಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಕವಿವಿ ಕುಲಪತಿ ಪ್ರೋ.ಕೆ.ಬಿ.ಗುಡಸಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ.ಬಿ., ಡಿವೈಎಸ್‍ಪಿ ಚಂದ್ರಶೇಖರ ಪೂಜಾರ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯ ಅಧಿಕಾರಿ ಮಹಾದೇವ ಹುಲಗೆಜ್ಜಿ, ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ಸಫಾಯಿ ಕರ್ಮಚಾರಿಗಳ ಜಾಗೃತ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಮಾಜ ಕಲ್ಯಾಣ ಇಲಾಖೆಯ  ಜಂಟಿ ನಿರ್ದೇಶಕರು ಡಾ.ಎನ್.ಆರ್.ಪುರುಷೋತ್ತಮ ಸ್ವಾಗತಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ ವಂದಿಸಿದರು. ಆಕಾಶವಾಣಿಯ ಹಿರಿಯ ಉದ್ಘೋಷಕಿ ಮಾಯಾರಾಮನ್ ಕಾರ್ಯಕ್ರಮ ನಿರೂಪಿಸಿದರು.

ಓಬವ್ವ ಆತ್ಮರಕ್ಷಣಾ ಕಲೆ ಕುರಿತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ  ಪ್ರಾತ್ಯಕ್ಷಿಕೆಯನ್ನು ನೀಡಿದರು.


Spread the love

Leave a Reply

Your email address will not be published. Required fields are marked *

You may have missed