ಕೊರೋನಾ ಗೆದ್ದು ಬಂದ ಸಾರಿಗೆ ಸಂಸ್ಥೆ ಅಧ್ಯಕ್ಷರಿಗೆ- ರಾಮನಗೌಡರ ಸ್ವಾಗತ
ಹುಬ್ಬಳ್ಳಿ: ಕೊರೋನಾ ಸೋಂಕಿನಿಂದ ಗುಣಮುಖರಾಗಿ ಕಚೇರಿಗೆ ಆಗಮಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ ಅವರನ್ನು ಹುಬ್ಬಳ್ಳಿ ವಿಭಾಗದ ವಿಭಾಗೀಯ ನಿಯಂಯ್ರಣಾಧಿಕಾರಿ ಎಚ್. ರಾಮನಗೌಡರ ಮತ್ತು ಅಧಿಕಾರಿಗಳು ಆತ್ಮೀಯವಾಗಿ ಅಭಿನಂದಿಸಿ ಸ್ವಾಗತ ಕೋರಿದರು.
ವಿ.ಎಸ್.ಪಾಟೀಲ ಮಾತನಾಡಿ, ಮನೆಯಲ್ಲಿ ಮಗಳು ಮತ್ತು ಮೊಮ್ಮಗಳಿಗೆ ಕೊರೋನಾ ಸೋಂಕು ತಗುಲಿದ್ದು ಗುಣಮುಖರಾಗಿದ್ದಾರೆ. ನನಗೆ ಯಾವುದೆ ಕೊರೋನಾ ರೋಗ ಲಕ್ಷಣಗಳಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ರಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಿಕೊಂಡಿದ್ದು ವರದಿ ನೆಗೆಟಿವ್ ಬಂದಿತ್ತು. ಯಾವುದಕ್ಕೂ ಇರಲಿ ಎಂದು ಗಂಟಲುದ್ರವ ಪರೀಕ್ಷೆ ಮಾಡಿಸಿಕೊಂಡಿದ್ದೆ. ಆಗಸ್ಟ್ 17 ರಂದು ಪಾಸಿಟಿವ್ ವರದಿ ಬಂದಿದ್ದು ಸೋಂಕು ದೃಢಪಟ್ಟಿರುವ ಬಗ್ಗೆ ತಿಳಿದುಬಂತು. ನನಗೆ 60 ವರ್ಷ ವಯಸ್ಸು. ಯಾವುದೇ ಆತಂಕಪಡದೆ ಹೋಂ ಐಸೋಲೇಶನ್ ನಲ್ಲಿದ್ದು ಅಗತ್ಯ ಚಿಕಿತ್ಸೆ ಪಡೆದುಕೊಂಡೆ. 24 ರಂದು ಮತ್ತೆ ಪರೀಕ್ಷೆ ಮಾಡಿಸಿದಾಗ ವರದಿ ನೆಗೆಟಿವ್ ಬಂದಿದೆ. ಸಂಪೂರ್ಣ ಗುಣಮುಖನಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಒಂದು ವಾರ ಹೋಂ ಕ್ವಾರೆಂಟೈನ್ ನಲ್ಲಿದ್ದು ನಂತರ ಕಚೇರಿಗೆ ಹಾಜರಾಗಿದ್ದೇನೆ ಎಂದು ಹೇಳಿದರು.
ಕೊರೋನಾ ಬಗ್ಗೆ ಅನಗತ್ಯ ಭಯ ಬೇಡ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅವಶ್ಯ. ಸೋಂಕು ದೃಢಪಟ್ಟಾಗ ಧೈರ್ಯಗುಂದದೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡು ಆತ್ಮ ವಿಶ್ವಾಸದಿಂದ ಯಾವಾಗಲೂ ಕ್ರೀಯಾಶೀಲವಾಗಿದ್ದರೆ ಯಾರು ಬೇಕಾದರೂ ಕೊರೋನಾವನ್ನು ಸುಲಭವಾಗಿ ಜಯಿಸಬಹುದು ಎಂದು ಅವರು ತಿಳಿಸಿದರು.
ವಿಭಾಗಿಯ ತಾಂತ್ರಿಕ ಶಿಲ್ಪಿ ಕಿರಣ ಕುಮಾರ ಬಸಾಪುರ, ಉಗ್ರಾಣ ಅಧಿಕಾರಿ ಹೊಸಮನಿ, ಲೆಕ್ಕಾಧಿಕಾರಿ ಸಂಜಯ ಮಾಸುಮಳಿ, ಕಾರ್ಮಿಕ ಕಲ್ಯಾಣ ಅಧಿಕಾರಿ ನಾಗಮಣಿ ಭೂಮಿ, ಘಟಕ ವ್ಯವಸ್ಥಾಪಕ ಸದಾನಂದ ಒಡೆಯರ ಇನ್ನಿತರರು ಉಪಸ್ಥಿತರಿದ್ದರು.
                      
                      
                      
                      
                      
                        