ವಾಕರಸಾಸಂಸ್ಥೆ, ಹುಬ್ಬಳ್ಳಿ ವಿಭಾಗ : ಕೊರೋನಾ ಗೆದ್ದು ಕರ್ತವ್ಯಕ್ಕೆ ಮರಳಿದ ಸಾರಿಗೆ ಸಿಬ್ಬಂದಿಗೆ ಅಭಿನಂದನೆ
1 min readಹುಬ್ಬಳ್ಳಿ: ಸಾರ್ವಜನಿಕರಲ್ಲಿ ಇನ್ನಿಲ್ಲದ ಭೀತಿ ಹುಟ್ಟಿಸಿರುವ ಕೊರೋನಾ ವಿರುದ್ಧ ಗೆದ್ದು ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ಐದು ಜನ ಸಾರಿಗೆ ಸಿಬ್ಬಂದಿಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ, ಸಂಸ್ಥೆಯ ಸಿಬ್ಬಂದಿಗೆ ಅಗತ್ಯ ಚಿಕಿತ್ಸೆ ನೀಡಲು ಸಕಾಲದಲ್ಲಿ ಸ್ಪಂದಿಸಿ ನೆರವಾದ ಕಿಮ್ಸ್ ಆಸ್ಪತ್ರೆ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಚಾಲಕರಾದ ಎಂ.ಎಲ್. ಪೂಜಾರ್ ಮತ್ತು ಕಿರಣ್ ಎಸ್. ಮಿಸ್ಕಿನ್, ನಿರ್ವಾಹಕರಾದ ಚಂದ್ರಶೇಖರ ಕೊಡ್ಲಿ ಮತ್ತು ಕೆ.ಎನ್.ಗೋಪಾಲಕೃಷ್ಣ ಹಾಗೂ ತಾಂತ್ರಿಕ ಸಿಬ್ಬಂದಿ ಗಿರೀಶ ಕಲಘಟಗಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮತ್ತು ಇತರೆ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಕರ್ತವ್ಯಕ್ಕೆ ಹಿಂದಿರುಗಿರುತ್ತಾರೆ.
ಆಸ್ಪತ್ರೆಗಳಲ್ಲಿನ ವೈದ್ಯರು ಹಾಗೂ ನರ್ಸುಗಳು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ, ಔಷಧ ನೀಡಿದ್ದಾರೆ. ನಮ್ಮೊಂದಿಗೆ ಆತ್ಮೀಯತೆಯಿಂದ ಮಾತನಾಡಿ, ನಮ್ಮಲ್ಲಿನ ಭಯ ಹೋಗಲಾಡಿಸಿ ಧೈರ್ಯ ತುಂಬಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಉತ್ತಮ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಅದರಿಂದಾಗಿ ನಾವು ಬೇಗನೆ ಗುಣಮುಖರಾಗಲು ಸಾಧ್ಯವಾಯಿತು ಎಂದು ಸಾರಿಗೆ ಸಿಬ್ಬಂದಿ ಕೃತಜ್ಞತೆ ವ್ಯಕ್ತಪಡಿಸಿದರು.
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಕೊರೋನಾ ಬಗ್ಗೆ ಭಯ ಬೇಡ. ಆದರೆ, ಸೋಂಕು ತಗುಲಿದ ನಂತರ ತೊಂದರೆ ಅನುಭವಿಸುವುದಕ್ಕಿಂತ ಸೋಂಕು ತಗುಲದಂತೆ ಮುಂಜಾಗ್ರತೆ ವಹಿಸುವುದು ಅವಶ್ಯ. ಸಾರಿಗೆ ಸಿಬ್ಬಂದಿಗಳು ಅದರಲ್ಲೂ ಮುಖ್ಯವಾಗಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕರ್ತವ್ಯದ ಸಮಯದಲ್ಲಿ ನಿತ್ಯವೂ ವಿವಿಧ ಸ್ತರದ ಹಲವಾರು ಜನರ ಸಂಪರ್ಕಕ್ಕೆ ಬರುವ ಅನಿವಾರ್ಯತೆ ಇರುತ್ತದೆ. ಆದ್ದರಿಂದ ಎಲ್ಲಾ ಸುರಕ್ಷಿತ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಅನುಸರಿಸಬೇಕು. ಒಂದು ವೇಳೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು.ಸೋಂಕು ದೃಡಪಟ್ಟಲ್ಲಿ ಧೃತಿಗೆಡದೆ ನಿಗಧಿತ ಆಸ್ಪತ್ರೆಗೆ ದಾಖಲಾಗಿ ಅಗತ್ಯ ಚಿಕತ್ಸೆ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸಂಸ್ಥೆಯ ವತಿಯಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.
ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ವಿಭಾಗೀಯ ತಾಂತ್ರಿಕ ಶಿಲ್ಪಿ ಕಿರಣಕುಮಾರ ಬಸಾಪುರ, ಉಪ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ದೊಡ್ಡ ಲಿಂಗಣ್ಣನವರ, ಕಾರ್ಮಿಕ ಕಲ್ಯಾಣ ಅಧಿಕಾರಿ ನಾಗಮಣಿ ಭೋವಿ, ಘಟಕ ವ್ಯವಸ್ಥಾಪಕ ವೈ.ಎಂ. ಶಿವರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.