ಪ್ರಾಮಾಣಿಕತೆ ಉಳಿಸಿಕೊಂಡ ಚಾಲಕ-ನಿರ್ವಾಹಕ: ಸಿಕ್ಕ ಹಣವನ್ನ ಮರಳಿಸಿದ ಮಾನವಂತರು

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ 10,000 ರೂ.ಗಳನ್ನು ಮರಳಿ ತಲುಪಿಸುವ ಮೂಲಕ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಒಂದನೇ ಘಟಕದ ಕೆಎ 25 ಎಫ್ 2966 ಸಂಖ್ಯೆಯ ಬಸ್ಸು ಇಲಕಲ್ ನಿಂದ ಹುಬ್ಬಳ್ಳಿಗೆ ಬರುವಾಗ ಕುಳಗೇರಿ ಕ್ರಾಸ್ ನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರೊಬ್ಬರು ಸುಮಾರು 10 ಸಾವಿರ ರೂಪಾಯಿಗಳು ಇರುವ ಪರ್ಸನ್ನು ಬಸ್ಸಿನಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಬಸ್ಸಿನಲ್ಲಿ ಪ್ರಯಾಣಿಕರ ಹೆಸರು- ದೂರವಾಣಿ ಸಂಖ್ಯೆಗಳನ್ನು ಪಡೆಯಲಾಗುತ್ತಿದೆ. ಸದರಿ ಮಾಹಿತಿಯ ಆಧಾರದ ಮೇಲೆ ಬಸ್ಸಿನ ಚಾಲಕ ಆರ್.ಎನ್.ಮಾಳವಾಡ ಮತ್ತು ನಿರ್ವಾಹಕ ಆರ್.ಡಿ. ದೇಗಾಂವಕರ್ ರವರು ಬಸ್ಸಿನಲ್ಲಿ ಪರ್ಸ್ ಸಿಕ್ಕಿರುವ ಆಸನದಲ್ಲಿ ಕುಳಿತು ಪ್ರಯಾಣಿಸಿದ ಪ್ರಯಾಣಿಕರನ್ನು ಹುಬ್ಬಳ್ಳಿ ನಿವಾಸಿ ಸಂತೋಷ ಎಂಬುದಾಗಿ ಪತ್ತೆ ಮಾಡಿರುತ್ತಾರೆ.ನಂತರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟಕಕ್ಕೆ ಕರೆಸಿಕೊಂಡು ಮೇಲಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಿಸಿ ಖಚಿತಪಡಿಸಿಕೊಂಡು ಹಣವಿದ್ದ ಪರ್ಸ್ ನ್ನು ಅವರಿಗೆ ಹಿಂದಿರುಗಿಸಿರುತ್ತಾರೆ. ಹಣ ಮರಳಿ ಪಡೆದ ಪ್ರಯಾಣಿಕ ಸಂತೋಷ ಚಾಲಕ- ನಿರ್ವಾಹಕರಿಗೆ ಕೃತಜ್ಞತೆ ತಿಳಿಸಿರುತ್ತಾರೆ. ಪ್ರಾಮಾಣಿಕತೆ ಮೆರೆದ ಚಾಲಕ- ನಿರ್ವಾಹಕರನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ಅಭಿನಂದಿಸಿದ್ದಾರೆ.