ಡೋಂಟ್ ವರಿ ಬಸ್ ಲ್ಲಿ ಅರಾಮಾಗಿ ಸಂಚರಿಸಿ- ಸಾರಿಗೆ ಸಂಸ್ಥೆ ಸುರಕ್ಷತೆ ಕ್ರಮ
1 min readಬಸ್ ಘಟಕ ಮತ್ತು ನಿಲ್ದಾಣಗಳಲ್ಲಿ ಸ್ಯಾನಿಟೇಷನ್, ಸುರಕ್ಷತಾ ಕ್ರಮಗಳ ಪಾಲನೆ:
‘ಸಾರ್ವಜನಿಕರು ಸಾರಿಗೆ ಬಸ್ಸುಗಳಲ್ಲಿ ನಿರ್ಭೀತಿಯಿಂದ ಸಂಚರಿಸಬಹುದು’
ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಾಕರಸಾ ಸಂಸ್ಥೆ, ಹುಬ್ಭಳ್ಳಿ ವಿಭಾಗದ ವ್ಯಾಪ್ತಿಯ ಬಸ್ ಘಟಕಗಳು ಮತ್ತು ಬಸ್ ನಿಲ್ದಾಣಗಳಲ್ಲಿ ರವಿವಾರ ಸೋಡಿಯಂ ಹೈಪೊಕ್ಲೋರೈಡ್ ದ್ರಾವಣ ಸಿಂಪಡಿಸಿ ಸ್ಯಾನಿಟೇಷನ್ ಮಾಡಲಾಯಿತು.
ಕೋವಿಡ್ ಅನ ಲಾಕ್ 5.0 ಜಾರಿಯಾದ ನಂತರ ನಿರ್ಬಂಧಗಳು ಮತ್ತಷ್ಟು ಸಡಿಲಗೊಂಡಿವೆ. ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.ಜನರ ಓಡಾಟ ಹೆಚ್ಚಾಗುತ್ತಿದೆ. ಲಾಕ್ ಡೌನ್ ಪೂರ್ವದಲ್ಲಿ ಇದ್ದಂತೆ ಜಿಲ್ಲೆಯೊಳಗೆ,ಗ್ರಾಮೀಣ ಪ್ರದೇಶಗಳಿಗೆ, ಹೊರ ಜಿಲ್ಲೆಗಳಿಗೆ ಮತ್ತು ನೆರೆಯ ರಾಜ್ಯಗಳಿಗೆ ಎಲ್ಲಾ ಮಾದರಿಯ ಬಸ್ಸುಗಳು ಸಂಚರಿಸುತ್ತಿವೆ. ಆರು ತಿಂಗಳ ನಂತರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಮರಳುತ್ತಿದೆ.
ಸಾರ್ವಜನಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಬಸ್ಸುಗಳ ಕಾರ್ಯಾಚರಣೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರತಿದಿನ ಎಲ್ಲಾ ಬಸ್ಸುಗಳನ್ನು ಒಳಭಾಗ ಮತ್ತು ಹೊರಭಾಗ ಸಂಪೂರ್ಣ ಸ್ವಚ್ಚಗೊಳಿಸಿ ಸ್ಯಾನಿಟೇಷನ್ ಮಾಡಲಾಗುತ್ತದೆ. ವಾರಕ್ಕೊಮ್ಮೆ ಬಸ್ ಘಟಕಗಳು ಮತ್ತು ನಿಲ್ದಾಣಗಳನ್ನು ಸ್ಯಾನಿಟೇಷನ್ ಮಾಡಲಾಗುತ್ತದೆ. ಜಿಲ್ಲಾಡಳಿತದ ನೆರವಿನಿಂದ ಎಲ್ಲಾ ಬಸ್ ಘಟಕಗಳಲ್ಲಿ ಸಂಸ್ಥೆಯ ಸಿಬ್ಬಂದಿಗೆ ಕೋವಿಡ್ ತಪಾಸಣಾ ಶಿಬಿರಗಳನ್ನು ನಡೆಸಲಾಗಿದೆ. ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಆಗಾಗ ಸ್ಯಾನಿಟೈಜರ್ ನಿಂದ ಕೈ ತೊಳೆಯುವಂತೆ ಕ್ರಮವಹಿಸಲಾಗಿದೆ.
ಬಸ್ ನಿಲ್ದಾಣ ಮತ್ತು ಬಸ್ಸಿನಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಬಸ್ಸುಗಳಲ್ಲಿ ಸೀಟುಗಳಷ್ಟು ಪ್ರಯಾಣಿಕರನ್ನು ಮಾತ್ರ ಅನುಮತಿಸಲಾಗುತ್ತದೆ. ಬಸ್ ಪ್ರಯಾಣ ಅತ್ಯಂತ ಸುರಕ್ಷಿತವಾಗಿದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಸಂಸ್ಥೆಯ ಬಸ್ಸುಗಳಲ್ಲಿ ನಿರ್ಭೀತಿಯಿಂದ ಪ್ರಯಾಣಿಸಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.