NGOದಲ್ಲೇ ಜೂಜಾಟ- ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಬಂಧನ
1 min readರಾಯಚೂರು: ಕೊರೋನಾ ಸಮಯದಲ್ಲೂ ವಿದ್ಯಾಗಮ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಬೇಕಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೇ ಇಸ್ಪೀಟ್ ಆಟದಲ್ಲಿ ಸಿಲುಕಿ ಇದೀಗ ಬಂಧನವಾಗಿರುವ ಪ್ರಕರಣ ನಡೆದಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಕಾರ್ಯಾಲಯವನ್ನೇ ಇಸ್ಪೀಟ್ ಅಡ್ಡೆ ಮಾಡಿಕೊಂಡಿದ್ದ ಕೆಲವರು ನಿರಂತರವಾಗಿ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿಯ ಮೇರೆಗೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಪೊಲೀಸರ ದಾಳಿ ನಡೆಸಿದಾಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ವೀರಭದ್ರಪ್ಪ ಸೇರಿದಂತೆ ಹನ್ನೆರಡು ಜನರನ್ನ ಬಂಧನ ಮಾಡಲಾಗಿದೆ.
ರಾಯಚೂರು ನಗರದ ಅಂಬೇಡ್ಕರ್ ವೃತ್ತದ ಬಳಿಯಿರುವ ಸಂಘದ ಕಾರ್ಯಾಲಯದಲ್ಲಿ ಜೂಜಾಟ ನಡೆಯುತ್ತಿತ್ತು. ನಿವೃತ್ತ ಶಿಕ್ಷಕರು ಸೇರಿದಂತೆ ಬೇರೆ ಬೇರೆ ಇಲಾಖೆಯ ನೌಕರರು ಹಾಗೂ ಕಚೇರಿಯ ಸಿಬ್ಬಂದಿಗಳು ಅಂದರ್- ಬಾಹರ್ ದಲ್ಲಿ ತೊಡಗಿದ್ದರೆಂದು ಪೊಲೀಸರು ತಿಳಿಸಿದ್ದು, ಬಂಧಿತರಿಂದ 23730 ರೂಪಾಯಿ ಹಾಗೂ ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆಯಲಾಗಿದೆ.
ಶಿಕ್ಷಣ ಇಲಾಖೆಯ ಶಿಕ್ಷಕರು ಅದೂ ಸಂಘದ ಜಿಲ್ಲಾಧ್ಯಕ್ಷರಾದವರೇ ಇಂತಹ ಕೃತ್ಯಗಳಲ್ಲಿ ತೊಡಗಿದರೇ, ಶಿಕ್ಷಕರ ಮೇಲಿನ ಗೌರವ ಏನಾಗಬಹುದೆಂಬ ಚಿಂತೆ ಇಂತವರಿಗೆ ಇರಬೇಕಲ್ಲವೇ..