ನವಲೂರು ಬ್ರಿಡ್ಜ್- ಕ್ರಿಮಿನಲ್ ಮೊಕದ್ದಮೆಗೆ ಸಿಎಂ ಆದೇಶ- ಶಾಸಕ ಬೆಲ್ಲದ ಮನವಿಗೆ ಸ್ಪಂದನೆ
ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆ ಬಿಆರ್ ಟಿಎಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ನವಲೂರು ಬ್ರಿಡ್ಜ್ ಕಾಮಗಾರಿ ಸರಿಯಾಗಿ ಆಗದಿರುವ ಬಗ್ಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸಿಎಂ ಯಡಿಯೂರಪ್ಪರಿಗೆ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಆದೇಶ ಮಾಡಿದ್ದಾರೆ.
ಬಿಆರ್ ಟಿಎಸ್ ಕಾಮಗಾರಿ ಅವೈಜ್ಷಾನಿಕವಾಗಿ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮವನ್ನ ತೆಗೆದುಕೊಂಡಿಲ್ಲ. ಹೀಗಾಗಿ ಸಿಮೆಂಟ್ ಪ್ಯಾನಲ್ ಗಳು ಕಿತ್ತು ಬಂದಿದ್ದು, ಒಳಗಡೆಯ ಮಣ್ಣು ಕುಸಿದು ಬೀಳುತ್ತಿದೆ. ಹೀಗಾಗಿ ಪ್ರಯಾಣಿಕರು ಆತಂಕದಲ್ಲಿದ್ದಾರೆಂದು ಸಿಎಂಗೆ ಶಾಸಕ ಅರವಿಂದ ಬೆಲ್ಲದ ಹೇಳಿಕೊಂಡಿದ್ದಾರೆ.
ಈ ಕಾಮಗಾರಿ ಕೈಗೊಂಡಿರುವ ಇಂಜಿನಿಯರ್ ಮತ್ತು ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಾಸಕ ಬೆಲ್ಲದ ಸಿಎಂರನ್ನ ವಿನಂತಿಸಿಕೊಂಡಿದ್ದರು.
ಶಾಸಕ ಅರವಿಂದ ಬೆಲ್ಲದರ ಮನವಿ ಸ್ವೀಕರಿಸಿದ ಸಿಎಂ ಯಡಿಯೂರಪ್ಪ, ನಗರಾಭಿವೃದ್ಧಿ ಇಲಾಖೆಯ ಸಹ ಕಾರ್ಯದರ್ಶಿಗೆ, ಸೂಕ್ತ ಕ್ರಮ ತೆಗೆದುಕೊಂಡು ಮೂರು ತಿಂಗಳಲ್ಲಿ ವರದಿ ನೀಡುವಂತೆ ಆದೇಶ ನೀಡಿದ್ದಾರೆ.