ನವಲಗುಂದದಲ್ಲಿ ಎರಡು ಮನೆಗಳಿಗೆ ನುಗ್ಗಿದ ಬೃಹತ್ ಟ್ಯಾಂಕರ: ನಿದ್ದೆಗಣ್ಣಲ್ಲಿದ್ದವರೆಲ್ಲ ಓಡಿದ್ದೆ ಓಡಿದ್ದು…!

ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಬೃಹದಾಕಾರದ ಟ್ಯಾಂಕರವೊಂದು ನಿಯಂತ್ರಣ ತಪ್ಪಿ ಎರಡು ಮನೆಗಳಿಗೆ ನುಗ್ಗಿದ್ದು, ಮನೆಯಲ್ಲಿ ಮಲಗಿದ್ದವರೆಲ್ಲ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾದ ಘಟನೆ ತಹಶೀಲ್ದಾರರ ಹಳೆ ಕಚೇರಿಯ ಸಮೀಪ ನಡೆದಿದೆ.
ನರಗುಂದ ಕಡೆಯಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಟ್ಯಾಂಕರ ಹೆಬಸೂರು ಮತ್ತು ತೋಟದ ಎಂಬುವವರ ಮನೆಗೆ ನುಗ್ಗಿದೆ. ಇದರಿಂದಾಗಿ ಮನೆಯ ಮುಂಭಾಗ ಸಂಪೂರ್ಣ ಬಿದ್ದು ಹೋಗಿದ್ದು, ಲಾರಿಯ ಮುಂಭಾಗದಲ್ಲಿ ಇಟ್ಟಂಗಿಗಳೇ ತುಂಬಿ ವಾಹನವೂ ಸಂಪೂರ್ಣ ನಜ್ಜುಗುಜ್ಜಾಗಿದೆ.
ಬೆಳಗಿನ ಜಾವ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಹಾಗೂ ಕ್ಲೀನರ್ ಕೂಡಾ ವಾಹನದಿಂದ ಜಿಗಿದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ. ಮನೆಯ ಕಟ್ಟೆಯ ಮೇಲೆ ಮಲಗಿದವರು ಟ್ಯಾಂಕರ ಡಿಕ್ಕಿಯಿಂದ ಒಳಗೆ ಓಡಿ ಹೋಗಿ ಪ್ರಾಣವನ್ನ ಬಚಾವ್ ಮಾಡಿಕೊಂಡು, ಏದುಸಿರು ಬಿಟ್ಟಿದ್ದಾರೆ.
ನವಲಗುಂದ ಠಾಣೆ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಟ್ಯಾಂಕರನ್ನ ತೆಗೆಯಲು ಮುಂದಾಗುತ್ತಿದ್ದಾರೆ. ಬೆಳ್ಳಂಬೆಳಗ್ಗೆ ನಡೆದ ಈ ಘಟನೆ ಪಟ್ಟಣದಲ್ಲಿ ಆತಂಕ ಮೂಡಿಸಿತ್ತು.
ವೆಂಕಟೇಶ ಪಾಟೀಲ ಎನ್ನುವವರಿಗೆ ಸೇರಿದ ಟ್ಯಾಂಕರ ಕಲಬುರಗಿಯಿಂದ ಕುಂದಾಪುರಕ್ಕೆ ಹೋಗುತ್ತಿತ್ತು.