ನಾಳೆ ನವಲಗುಂದ, ಅಳ್ನಾವರಗೆ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ…!
1 min readಧಾರವಾಡ: ಸೆಪ್ಟಂಬರ್ 5 ಭಾನುವಾರ ಜಿಲ್ಲೆಗೆ ಕೇಂದ್ರ ಸರ್ಕಾರದ ಅತಿವೃಷ್ಟಿ ಅಧ್ಯಯನ ತಂಡ ಭೇಟಿ ನೀಡಲಿದ್ದು ಜಿಲ್ಲೆಯ ಅಳ್ನಾವರ ,ಧಾರವಾಡ ಶಹರ ಹಾಗೂ ನವಲಗುಂದ ತಾಲೂಕಿನ ಹಾನಿಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಇಂದು ನಡೆದ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಭಾರತ ಸರ್ಕಾರದ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ ಜೆ, ಕೇಂದ್ರ ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶಕುಮಾರ್ ಅವರನ್ನು ಒಳಗೊಂಡ ಅಂತರ್ ಸಚಿವಾಲಯ ಅಧ್ಯಯನ ತಂಡವು ಬೆಳಿಗ್ಗೆ 8.40 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.ಬಳಿಕ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯ ಕುರಿತು ಮಾಹಿತಿ ಪಡೆಯಲಿದೆ.
ಬೆಳಿಗ್ಗೆ 10.45 ಕ್ಕೆ ಅಳ್ನಾವರ ತಾಲೂಕಿನ ಕಂಬಾರಗಣವಿಯ ಜೈಭಾರತ್ ಕಾಲನಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಮನೆ, ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗದ ರಸ್ತೆ, 11.25 ಕ್ಕೆ ಹೂಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ,ಮೆಕ್ಕೆಜೋಳ ಬೆಳೆ ಹಾನಿ,ರಸ್ತೆ,ಸೇತುವೆಗಳ ಹಾನಿಯನ್ನು ವೀಕ್ಷಿಸುವರು.
11.45 ಕ್ಕೆ ಅಳ್ನಾವರದ ಡೌಗಿ ನಾಲಾ, ಮಧ್ಯಾಹ್ನ 12.10 ಕ್ಕೆ ಪುರ ಗ್ರಾಮದ ಸೇತುವೆ,12.25 ಕ್ಕೆ ಅಳ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರ,12.50 ಕ್ಕೆ ಬೆಣಚಿ ಗ್ರಾಮದ ಬಳಿಯ ಸೇತುವೆ,ಹೆಸ್ಕಾಂ ಸೌಕರ್ಯಗಳ ಹಾನಿ ಪರಿಶೀಲನೆ , 1.15 ಕ್ಕೆ ಅರವಟಗಿಯ ಅಂಗನವಾಡಿ ಕೇಂದ್ರ , ಮಧ್ಯಾಹ್ನ 1.40 ಕ್ಕೆ ಧಾರವಾಡದ ಕುಮಾರೇಶ್ವರ ನಗರದ ರಸ್ತೆ ಹಾನಿ ಸ್ಥಳಕ್ಕೆ ಭೇಟಿ ನೀಡುವರು.
ಮಧ್ಯಾಹ್ನ 3.15 ಕ್ಕೆ ಆರೇಕುರಹಟ್ಟಿಯ ರಸ್ತೆ,ಪ್ರಾಥಮಿಕ ಶಾಲೆ, ಯಮನೂರು ಗ್ರಾಮದ ಹೆಸರುಬೇಳೆ ,ಉಳ್ಳಾಗಡ್ಡಿ ಬೆಳೆಹಾನಿ ಪ್ರದೇಶ,ಸಂಜೆ 4 ಗಂಟೆಗೆ ನವಲಗುಂದದ ರೋಣ ಕ್ರಾಸಿನಲ್ಲಿ ತೋಟಗಾರಿಕೆ ಬೆಳೆ ಹಾನಿ ಸ್ಥಳ ವೀಕ್ಷಿಸಿ ಬಾಗಲಕೋಟ ಜಿಲ್ಲೆಗೆ ತೆರಳುವರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲ,ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ವೇದಿಕೆಯಲ್ಲಿದ್ದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ, ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ.ಚೌಡಣ್ಣವರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ ಮುನವಳ್ಳಿ, ತಹಸೀಲ್ದಾರರಾದ ಪ್ರಕಾಶ ನಾಶಿ, ಡಾ.ಸಂತೋಷಕುಮಾರ ಬಿರಾದಾರ,ಅಮರೇಶ ಪಮ್ಮಾರ,ಯಲ್ಲಪ್ಪ ಗೋಣೆಣ್ಣವರ, ನವೀನ ಹುಲ್ಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.