ಕೆಎಲ್ಇಯವರೇ ಆಸ್ತಿ ಮರಳಿಸಿ, ಕೆಲ್ಸಾ ಬಂದ್ ಮಾಡಿ: ಲಿಂಗಾಯತ ಮುಖಂಡ ಆಗ್ರಹ
ಹುಬ್ಬಳ್ಳಿ: ಮೂರುಸಾವಿರ ಮಠದ ಉನ್ನತ ಸಮಿತಿ ಕೂಡಲೇ ಸಭೆ ಕರೆದು ಕೆ.ಎಲ್.ಇ ಸಂಸ್ಥೆಗೆ ವೈದ್ಯಕೀಯ ಮಹಾವಿದ್ಯಾಲಯಕ್ಕಾಗಿ ಪರಭಾರೆ ಮಾಡಿರುವ ಆಸ್ತಿಯನ್ನು 15 ದಿನಗಳಲ್ಲಿ ಮರಳಿ ವಾಪಸ್ ಪಡೆಯಲು ಮುಂದಾಗಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಹೇಳಿದ್ದಾರೆ.
ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠದ ವಿಚಾರ ದಿನಂಪ್ರತಿ ಸುದ್ದಿಯಾಗುತ್ತಿದ್ದರೂ ಉನ್ನತ ಸಮಿತಿಯವರು ತಮಗೆ ಸಂಬಂಧವೇ ಇಲ್ಲದಂತೆ ಇರುವುದು ದುರದೃಷ್ಟಕರ. ಈಗಾಗಲೇ ಸಮುದಾಯದ ಜನರಿಗೆ ವಾಸ್ತವದ ಅರಿವಾಗುತ್ತಿದ್ದು ಕೋಟ್ಯಂತರ ರೂ.ಬೆಲೆ ಬಾಳುವ ಆಸ್ತಿ ಮರಳಿ ಪಡೆಯಬೇಕೆಂಬ ಅಭಿಪ್ರಾಯ ಸಾರ್ವತ್ರಿಕವಾಗುತ್ತಿದೆ.ಕೇವಲ ರಾಜಕಾರಣಿಗಳಿರುವ ಸಮಿತಿ ವಿಸರ್ಜಿಸಿ ಸಮುದಾಯದ ಗಣ್ಯರು,ಉದ್ಯಮಿಗಳು,ನಿವೃತ್ತ ಅಧಿಕಾರಿಗಳನ್ನು ಸೇರ್ಪಡೆ ಮಾಡಿದಲ್ಲಿ ಒಳ್ಳೆಯದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಠದ ಉನ್ನತ ಸಮಿತಿಯವರು ಜನರ ಅನುಕೂಲಕ್ಕೆ ತಕ್ಕಂತೆ ಮಠದ ಆಸ್ತಿಗಳನ್ನು ಬಳಸಬೇಕು. ಜನರಿಂದ ದೇಣಿಗೆ ಪಡೆದಂತೆ ಆಸ್ತಿಗಳನ್ನು ಮತ್ತೊಬ್ಬರಿಗೆ ದಾನವಾಗಿ ನೀಡುವುದು ಸರಿಯಲ್ಲ ಎಂದಿರುವ ಗೌರಿ ಕೂಡಲೇ ಆರಂಭಿಸಿರುವ ಕಾಮಗಾರಿಯನ್ನು ಕೆ.ಎಲ್.ಇ ಸಂಸ್ಥೆಯವರು ಸ್ಥಗಿತಗೊಳಿಸಲು ಆಗ್ರಹಿಸಿದ್ದಾರೆ.
ಸುಪ್ರೀಂಕೋರ್ಟನಲ್ಲಿ ಆಸ್ತಿಗಳನ್ನು ಪರಭಾರೆ ಮಾಡುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟು ನಂತರ ಮತ್ತೊಬ್ಬರಿಗೆ ದಾನವಾಗಿ ನೀಡಿರುವುದು ಸರಿಯಲ್ಲ ಎಂದು ಕಾನೂನು ತಜ್ಞರು ಸಹ ಅಭಿಪ್ರಾಯಪಟ್ಟಿದ್ದು ಈಗಾಗಲೇ ಲಿಂಗಾಯತ ಪ್ರಮುಖರ ಸಭೆ ಸಹ ನಡೆಯುತ್ತಿದ್ದು ಇಷ್ಟರಲ್ಲೇ ಹೋರಾಟದ ರೂಪುರೇಷೆ ಅಂತಿಮಗೊಳ್ಳಲಿದೆ ಎಂದಿದ್ದಾರೆ.