ನಿವೃತ್ತ ಪ್ರಾಂಶುಪಾಲ ಹತ್ಯೆ- ಶಿಕ್ಷಕರೇ ಕೊಲೆಗಾರರು: ಬೆಚ್ಚಿಬಿದ್ದ ಪೊಲೀಸರು
1 min readಮೈಸೂರು: ಗುರು ಬ್ರಹ್ಮ.. ಗುರು ವಿಷ್ಣು.. ಗುರು ದೇವೋ ಮಹೇಶ್ವರ ಎಂದುಕೊಂಡು ನೌಕರಿ ಪಡೆದಿರುವ ಪೊಲೀಸರೇ ಈ ಪ್ರಕರಣದಿಂದ ಹೈರಾಣಾಗಿದ್ದು, ನಿವೃತ್ತ ಪ್ರಾಂಶುಪಾಲರನ್ನ ಕೊಲೆ ಮಾಡಿದ್ದು ಶಿಕ್ಷಕರು ಎನ್ನುವುದನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯೂ ಆಗಿದ್ದಾರೆ.
ಮೈಸೂರಿನಲ್ಲಿ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿಯವರ ಕೊಲೆ ಸೆಪ್ಟಂಬರ್ 20ರಂದು ನಗರದ ಶಾರದಾದೇವಿ ನಗರದಲ್ಲಿ ನಡೆದಿತ್ತು. ಪ್ರಕರಣ ಸಾಕಷ್ಟು ಕಗ್ಗಂಟಾಗಿತ್ತಾದರೂ ಕೊನೆಗಳಿಗೆಯಲ್ಲಿ ಕೊಲೆಗೆಡುಕರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಮೈಸೂರಿನ ಶಾರದಾನಗರದಲ್ಲಿ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿಯವರನ್ನ ಅವರದ್ದೇ ನಿವಾಸದಲ್ಲಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಘಟನೆಯ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಇದೊಂದು ಸುಫಾರಿ ಕೊಲೆ ಎಂದು ಪತ್ತೆ ಮಾಡಿದ್ದಾರೆ. ಘಟನೆಯಲ್ಲಿ ಶಿಕ್ಷಕರೇ ಸುಫಾರಿ ಕೊಟ್ಟಿದ್ದು ಎಂಬುದು ಗೊತ್ತಾಗಿದ್ದು, ಪೊಲೀಸರು ಕೂಡಾ ದಂಗಾಗಿದ್ದಾರೆ.
ಹತ್ಯೆಯಾದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ನಡೆಸುತ್ತಿದ್ದ ವಿಶ್ವ ಚೇತನ ಸಂಸ್ಕೃತ ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ, ಸುಫಾರಿಗೆ ಮಧ್ಯಸ್ತಿಕೆ ವಹಿಸಿದ್ದ ಮಡಿವಾಳಸ್ವಾಮಿ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕ ಸಿದ್ಧರಾಜು, ಸಹಶಿಕ್ಷಕ ಪರಶಿವ ಬಂಧಿತರಾಗಿದ್ದಾರೆ. ಇವರೊಂದಿಗೆ ಗಾರೆ ಮೇಸ್ತ್ರಿ ನಿರಂಜನ ಮತ್ತು IDFC ಬ್ಯಾಂಕ್ ರಿಕವರಿ ಆಫೀಸರ್ ನಾಗೇಶ್ ಬಂಧಿತರಾಗಿದ್ದಾರೆ.
ಸಂಬಳದಲ್ಲಿ ಹಣ ನೀಡುವಂತೆ ಪರಶಿವಮೂರ್ತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಹತ್ಯೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾದ ಮೈಸೂರಿನ ಸರಸ್ವತಿಪುರಂ ಪೊಲೀಸರು ತಿಳಿಸಿದ್ದಾರೆ.