”ಖಾಕಿ ಕೆಂಗಣ್ಣಿಗೆ ಸಿಲುಕಿದ ‘ನಟ ಭಯಂಕರ’ ಹಂತಕ… SP ಗುಂಜನ ಆರ್ಯ ಅವರು ಬಿಚ್ಚಿಟ್ಟ ಸತ್ಯವೇನು ಗೊತ್ತಾ…!!!?
ಪ್ರಿಯತಮನೇ ಪ್ರಾಣಪಕ್ಷಿ ಹರಣ ಮಾಡಿದ ಹಂತಕ: ಝಕೀಯಾ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಧಾರವಾಡ: ನಗರದ ಹೊರವಲಯದಲ್ಲಿ ನಡೆದಿದ್ದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಝಕೀಯಾ ಮುಲ್ಲಾ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪ್ರೀತಿಯ ನಾಟಕವಾಡಿದ್ದ ಪ್ರಿಯತಮನೇ ಆಕೆಯನ್ನು ಕೊಲೆಗೈದಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಆರೋಪಿ ಶಾಬೀರ್ ಮುಲ್ಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮದುವೆ ವಿಚಾರಕ್ಕೆ ಶುರುವಾದ ಕಿರಿಕ್: ಕಳೆದ ಮೂರು ವರ್ಷಗಳಿಂದ ಝಕೀಯಾ ಹಾಗೂ ಶಾಬೀರ್ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇತ್ತೀಚೆಗೆ ಮದುವೆ ವಿಚಾರವಾಗಿ ಇಬ್ಬರ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದವು. ಘಟನೆಯ ದಿನ ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಝಕೀಯಾಳನ್ನು ಸಾಬೀರ್ ತನ್ನ ಕಾರಿನಲ್ಲಿ ಸುತ್ತಾಡಿಸಿದ್ದಾನೆ. ಈ ವೇಳೆ ಮದುವೆ ವಿಚಾರವಾಗಿ ಮತ್ತೆ ಜಗಳ ತಾರಕಕ್ಕೇರಿದ್ದು, ಆಕ್ರೋಶಗೊಂಡ ಶಾಬೀರ್ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಹತ್ಯೆ ಮಾಡಿ ಶವವನ್ನು ರಸ್ತೆ ಪಕ್ಕ ಎಸೆದಿದ್ದಾನೆ.
ಪೊಲೀಸರ ಕಣ್ಣಿಗೆ ಮಣ್ಣೆರಚಲು ಡ್ರಾಮಾ: ಹತ್ಯೆಯ ನಂತರ ಯಾರಿಗೂ ಅನುಮಾನ ಬರಬಾರದೆಂದು ಆರೋಪಿ ಶಾಬೀರ್, ಝಕೀಯಾಳ ಮೊಬೈಲ್‌ನಿಂದಲೇ “ನಾನು ಸಾಯಲು ಬಂದಿದ್ದೇನೆ, ನನ್ನನ್ನು ಹುಡುಕಬೇಡಿ” ಎಂದು ಮೆಸೇಜ್ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಮರುದಿನ ಬೆಳಿಗ್ಗೆ ಏನೂ ಅರಿಯದವನಂತೆ ಶವ ಬಿದ್ದಿದ್ದ ಸ್ಥಳಕ್ಕೆ ಬಂದು ಪೊಲೀಸರಿಗೆ ತಪ್ಪು ಮಾಹಿತಿ ನೀಡುತ್ತಾ ನಾಟಕವಾಡಿದ್ದ.
ಪೊಲೀಸರ ಚಾಣಾಕ್ಷತನ: ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಶಾಬೀರ್‌ನ ವರ್ತನೆಯನ್ನು ಕಂಡು ಅನುಮಾನಗೊಂಡಿದ್ದರು. ಆತನ ಮೊಬೈಲ್ ನೀಡುವಂತೆ ಕೇಳಿದಾಗ ಆತ ನಿರಾಕರಿಸಿದ್ದು ಅನುಮಾನವನ್ನು ದಟ್ಟವಾಗಿಸಿತು. ಕೂಡಲೇ ತಾಂತ್ರಿಕ ದಾಖಲೆಗಳನ್ನು ಪರಿಶೀಲಿಸಿದಾಗ ಹಂತಕ ಸಾಬೀರ್ ಎಂಬುದು ಸಾಬೀತಾಗಿದೆ.
ತನಿಖೆ ಮುಂದುವರಿಕೆ:“ಪ್ರಕರಣದಲ್ಲಿ ಸದ್ಯಕ್ಕೆ ಇಬ್ಬರ ಪಾತ್ರ ಕಂಡುಬಂದಿದೆ. ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದು, ಹತ್ಯೆಯಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಲಾಗುವುದು,” ಎಂದು ಎಸ್ಪಿ ಗುಂಜನ್ ಆರ್ಯ ಭರವಸೆ ನೀಡಿದ್ದಾರೆ. ಇತ್ತ “ಮಗಳ ಸಾವಿಗೆ ನ್ಯಾಯ ಬೇಕು, ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಶಿಕ್ಷೆಯಾಗಲಿ” ಎಂದು ಮೃತಳ ಸಂಬಂಧಿ ಮೊಹಮ್ಮದ್ ಇರ್ಫಾನ್ ಆಗ್ರಹಿಸಿದ್ದಾರೆ.
