ಹುಬ್ಬಳ್ಳಿ: ಜಾತಿಗೊಂದು ಜೀವ ಬಲಿ… ತುಂಬು ಗರ್ಭೀಣಿ ಮಾನ್ಯ ಪಾಟೀಲ ಹತ್ಯೆ…!!!
ಹೆತ್ತವನ ಕೈಯಲ್ಲೇ ಹೋದ ಮಗಳ ಜೀವ: ಜಾತಿ ಎಂಬ ಬೆಂಕಿಗೆ ಬಲಿಯಾಯಿತೇ ತಂದೆಯ ಪ್ರೀತಿ…?
ಹುಬ್ಬಳ್ಳಿ: “ತಂದೆಯೇ ಮಗಳ ಮೊದಲ ಹೀರೋ” ಎನ್ನುವ ನಂಬಿಕೆಯನ್ನು ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಘಟನೆಯೊಂದು ಅಕ್ಷರಶಃ ಸುಟ್ಟು ಹಾಕಿದೆ. ಹೆತ್ತ ಮಗಳ ಸಂಭ್ರಮವನ್ನು ಕಂಡು ನಲಿಯಬೇಕಿದ್ದ ತಂದೆಯೇ, ಅವಳ ಉಸಿರು ನಿಲ್ಲಿಸುವ ಮೂಲಕ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದ್ದಾರೆ.
ಪ್ರೀತಿಗೆ ಜಾತಿಯ ಮುಳ್ಳು. ಯುವತಿ ತನ್ನ ಮನಮೆಚ್ಚಿದ ಹುಡುಗನನ್ನೇ ಕೈಹಿಡಿದು ಬದುಕಬೇಕೆಂದು ಕನಸು ಕಂಡಿದ್ದಳು. ಆದರೆ ಆಕೆ ಪ್ರೀತಿಸಿದ ಹುಡುಗ ಬೇರೆ ಜಾತಿಯವನೆಂಬ ಒಂದೇ ಕಾರಣಕ್ಕೆ, ಹೆತ್ತ ತಂದೆಯ ಪ್ರೀತಿ ದ್ವೇಷವಾಗಿ ಮಾರ್ಪಟ್ಟಿತ್ತು. ಮನೆಯವರ ವಿರೋಧದ ನಡುವೆಯೂ ಹಸೆಮಣೆ ಏರಿ ಹೊಸ ಬದುಕು ಕಟ್ಟಿಕೊಳ್ಳಲು ಹೋದ ಮಗಳ ನಿರ್ಧಾರ, ತಂದೆಯ ಪಾಲಿಗೆ ‘ಗೌರವ’ದ ಪ್ರಶ್ನೆಯಾಗಿ ಕಂಡಿತು.
ಒಡೆದ ಹೊನಲು, ನಿಂತ ಬದುಕು ಜಾತಿಯ ಮಡಿವಂತಿಕೆಯ ಮುಂದೆ ಜನ್ಮ ಕೊಟ್ಟ ಮಗಳ ಪ್ರೀತಿ ತಂದೆಗೆ ಗೌಣವಾಯಿತು. ತನ್ನ ರಕ್ತದ ಕಣವನ್ನೇ ಕೊಲ್ಲುವಷ್ಟು ಕಠಿಣ ಮನಸ್ಸು ಮಾಡಿದ ತಂದೆ, ಅಂತಿಮವಾಗಿ ಆಕೆಯ ಪ್ರಾಣವನ್ನೇ ತೆಗೆದಿದ್ದಾರೆ. ಇನಾಂ ವೀರಾಪುರ ಗ್ರಾಮ ಇಂದು ಮೌನವಾಗಿದೆ. ಆದರೆ ಆ ಮೌನದಲ್ಲಿ ಸುಟ್ಟು ಹೋದ ಕನಸುಗಳ, ಅರ್ಧಕ್ಕೆ ನಿಂತ ಬದುಕಿನ ಆಕ್ರಂದನ ಕೇಳಿಬರುತ್ತಿದೆ.
”ಹುಟ್ಟಿದಾಗಿನಿಂದ ತನ್ನ ಕೈಬೆರಳು ಹಿಡಿದು ನಡೆಸಿದ ತಂದೆಯೇ, ಇಂದು ಮಗಳ ಕುತ್ತಿಗೆಗೆ ಕುಣಿಕೆಯಾಗಿದ್ದು ಕಾಲದ ಕ್ರೂರ ವೈಪರೀತ್ಯ.”
ನಾವೆತ್ತ ಸಾಗುತ್ತಿದ್ದೇವೆ?
ನಾವು ಚಂದ್ರಯಾನ ಮಾಡುತ್ತಿದ್ದೇವೆ, ತಂತ್ರಜ್ಞಾನದಲ್ಲಿ ಬೆಳೆಯುತ್ತಿದ್ದೇವೆ. ಆದರೆ ಇಂದಿಗೂ ‘ಜಾತಿ’ ಎಂಬ ಭೂತ ಮನುಷ್ಯತ್ವವನ್ನು ನುಂಗಿ ನೀರು ಕುಡಿಯುತ್ತಿದೆ. ಮಗಳ ಸುಖಕ್ಕಿಂತ ಸಮಾಜದ ಮಾತುಗಳಿಗೆ ಬೆಲೆ ನೀಡಿದ ತಂದೆ, ಇಂದು ಕೇವಲ ಆರೋಪಿಯಾಗಿ ಉಳಿದಿದ್ದಾರೆ. ಜಾತಿಯ ಹೆಸರಿನಲ್ಲಿ ನಡೆಯುವ ಇಂತಹ ‘ಗೌರವ ಹತ್ಯೆ’ಗಳು (Honour Killing) ನಾಗರಿಕ ಸಮಾಜಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ.
ಆ ಯುವತಿ ಕಂಡ ಕನಸುಗಳು ಮಣ್ಣಾಗಿದ್ದರೂ, ಆಕೆಯ ಮರಣವು ಸಮಾಜದ ಈ ಕುರುಡು ನಂಬಿಕೆಗಳನ್ನು ಪ್ರಶ್ನಿಸುತ್ತಿದೆ. ಪ್ರೀತಿಗಿಂತ ಜಾತಿ ದೊಡ್ಡದಾದಾಗ ಅಪ್ಪನ ಪ್ರೀತಿಗೂ ವಿಷದ ಛಾಯೆ ಆವರಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
