ಬರ್ತಡೇ ಮುನ್ನವೇ ಪ್ರೂಟ್ ಇರ್ಫಾನ್ ಹತ್ಯೆ: ಯಾಕಾಯಿತು..? ಮಾಡಿದ್ಯಾರು..? ಉತ್ತರಿಸಿ ..!
1 min readಹುಬ್ಬಳ್ಳಿ: ಧಾರವಾಡದ ರೌಡಿಷೀಟರ್ ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಹಾಡುಹಗಲೇ ಹತ್ಯೆ ನಡೆದು ಐದು ದಿನವಾದರೂ ಆರೋಪಿಗಳು ಸಿಗದೇ ಇರುವುದು ಸೋಜಿಗ ಮೂಡಿಸಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಸಭಾಂಗಣದ ಮುಂದೆ ನಿಂತು ಬೀಗರನ್ನ ಕಳಿಸುತ್ತಿದ್ದ ಪ್ರೂಟ್ ಮೇಲೆ ಮೂವರು ಒಂದೇ ಸಮನೆ ಗುಂಡಿನ ಮಳೆಗೈದಿದ್ದರು. ಅದಾದ ನಂತರ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದವು.
ದೃಶ್ಯಗಳು ಹೊರಬಿದ್ದ ನಂತರ ಬುಲೆಟ್ ನಲ್ಲಿ ಕರೆದುಕೊಂಡು ಬಂದವನ, ಡಿಯೋದಲ್ಲಿ ಕರೆದುಕೊಂಡು ಹೋದವನು ಹೀಗೆ ಹತ್ಯೆ ನಡೆದಾಗ ಹಲವರ ಪಾತ್ರಗಳು ಕಂಡು ಬಂದಿದ್ದವು. ಅದೇ ಪ್ರಕಾರ ಹಲವರನ್ನ ಕರೆದು ವಿಚಾರಣೆ ನಡೆಸಿಯೂ ಆಗಿತ್ತಾದರೂ, ಇಲ್ಲಿಯವರೆಗೆ ಆರೋಪಿಗಳ ಬಂಧನ ಆಗಿದೇಯಾ..? ಇಲ್ವಾ ಎಂಬುದನ್ನ ಸ್ಪಷ್ಟವಾಗಿ ಪೊಲೀಸ್ ಅಧಿಕಾರಿಗಳು ಹೇಳಿಯೇ ಇಲ್ಲ.
ಬುಲೆಟ್ ನಡೆಸುತ್ತಿದ್ದ ಮತ್ತು ಡಿಯೋ ನಡೆಸುತ್ತಿದ್ದ ಯುವಕನ ಬಂಧನವಾಗಿದೆ. ಹತ್ಯೆಗೆ ಸಂಬಂಧಿಸಿದಂತೆ ಝೈಲೋ ಕಾರು ಬಳಕೆಯಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆಯಷ್ಟೇ. ಆದರೆ, ನಗರದಲ್ಲಿ ಭಯ ಮೂಡಿಸಿದ ಕೊಲೆ ನಡೆದು ಇಷ್ಟು ದಿನಗಳಾದರೂ ತನಿಖೆ ಯಾವ ಹಂತಕ್ಕೆ ಬಂದಿದೆ ಎಂಬುದು ಕೂಡಾ ಅಧಿಕೃತವಾಗಿ ಹೇಳುತ್ತಿಲ್ಲ.
ಪೊಲೀಸ್ ಇಲಾಖೆಯ ಈ ವಿಳಂಬದ ಬಗ್ಗೆ ಕೆಲವರು ಕೆಲವು ರೀತಿಯಲ್ಲಿ ಮಾತನಾಡಿಕೊಳ್ಳುವಂತಾಗಿದ್ದು, ಆರೋಪಿಗಳ ಬಗ್ಗೆ ನಿಖರವಾದ ಮಾಹಿತಿಯನ್ನ ಹೊರ ಹಾಕಬೇಕಿದೆ.
ಪ್ರೂಟ್ ಇರ್ಫಾನ್ ನಾಳೆ ಜನ್ಮದಿನ
ಹತ್ಯೆಯಾದ ಪ್ರೂಟ್ ಇರ್ಫಾನನ ಹುಟ್ಟುಹಬ್ಬ ನಾಳೆಯೇ ಇದ್ದು, ಆತನ ಜೊತೆಗಿದ್ದವರು ಕಳೆದ ವರ್ಷದ ಭಾವಚಿತ್ರಗಳನ್ನೇ ಶೇರ್ ಮಾಡಿಕೊಳ್ಳುತ್ತಿದ್ದಾರೆ. ರೌಡಿ ಷೀಟರ್ ಇರ್ಫಾನ್ ತನ್ನ ಹುಟ್ಟುಹಬ್ಬದ ಐದು ದಿನ ಮೊದಲೇ ಹತ್ಯೆಯಾಗಿದ್ದು ಪರಿಸ್ಥಿತಿಯ ವ್ಯಂಗ್ಯವೆನ್ನಬಹುದು.