“ಡಾ.ಎಂಬಿಎಂ ಇಲ್ಲದ ‘1’ ವರ್ಷ: ಕಿಮ್ಸ್‌ಗೆ 10 ಲಕ್ಷ ರೂ. ದೇಣಿಗೆ ನೀಡಿದ ಮುನೇನಕೊಪ್ಪ ಕುಟುಂಬ…
1 min readಕಿಮ್ಸ್ ಕ್ಯಾನ್ಯರ್ ರೋಗಿಗಳ ನೆರವಿಗೆ 10 ಲಕ್ಷ ನೆರವು
ಮುನೇನಕೊಪ್ಪ ಕುಟುಂಬದಿಂದ ಚೆಕ್ ಹಸ್ತಾಂತರ
ಹುಬ್ಬಳ್ಳಿ: ಸ್ಥಳೀಯ ಅಶೋಕ ನಗರ ನಿವಾಸಿ, ನವಲಗುಂದ ತಾಲೂಕಿನ ಅಮರಗೋಳ ಗ್ರಾಮದವರಾದ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಲ್ಲನಗೌಡ ಬಸನಗೌಡ ಪಾಟೀಲ ಮುನೇನಕೊಪ್ಪ ಅವರು ನಿಧನರಾಗಿ ಇಂದಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರು ಬಡ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ 10 ಲಕ್ಷ ರೂ. ಗಳ ಚೆಕ್‌ನ್ನ ಕಿಮ್ಸಗೆ ಹಸ್ತಾಂತರಿಸಿದರು.
ಡಾ.ಮುನೇನಕೊಪ್ಪ ಅವರ ಪತ್ನಿ ಶೈಲಜಾ ಪಾಟೀಲ ಅವರು ಕಿಮ್ಸ್ ನಿರ್ದೇಶಕರಾದ ರಾಮಲಿಂಗಪ್ಪ ಅಂಟರದಾನಿಯವರಿಗೆ ಆರ್ಥಿಕ ನೆರವಿನ ಚೆಕ್ ನೀಡಿದರು. ಈ ವೇಳೆ ಡಾ.ಚನ್ನಬಸಪ್ಪ ಕೋರಿ, ನೀಲಮ್ಮ ಯಲಿಗಾರ ಹಾಗೂ ಕುಟುಂಬದ ಇತರ ಸದಸ್ಯರು ಇದ್ದರು.
1981ರಲ್ಲಿ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ವೈದ್ಯಕೀಯ ವೃತ್ತಿ ಆರಂಭಿಸಿ ಗೋಪನಕೊಪ್ಪ, ನವಲಗುಂದ ತಾಲೂಕಿನ ಗ್ರಾಮಗಳಲ್ಲಿ ಬಡವರ ವೈದ್ಯರೆಂದೆ ಹೆಸರಾಗಿದ್ದ ಡಾ.ಮುನೇನಕೊಪ್ಪ ಅವರ ಇಚ್ಛೆಯಂತೆ ವೈದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲವಾಗಲೆಂದು ಕಿಮ್ಸ್ ವೈದ್ಯಕೀಯ ಕಾಲೇಜಿಗೆ ದೇಹ ದಾನ ಮಾಡಲಾಗಿತ್ತಲ್ಲದೇ ಎರಡೂ ಕಣ್ಣುಗಳನ್ನು ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೆ ನೀಡಲಾಗಿತ್ತು. ದೇಹ ಮತ್ತು ಕಣ್ಣುಗಳ ದಾನ ಮಾಡಿ ಅವರು ಸಾವಿನ ನಂತರವೂ ಸಾರ್ಥಕತೆ ಮೆರೆದಿದ್ದರು. ಡಾ.ಎಂ.ಬಿ.ಮುನೇನಕೊಪ್ಪ ಅವರು ಮಾಜಿ ಸಚಿವ ಶಂಕರ ಪಾಟೀಲ ಅವರ ಹಿರಿಯ ಸಹೋದರರಾಗಿದ್ದಾರೆ.