Posts Slider

Karnataka Voice

Latest Kannada News

ಬೆಣ್ಣೆಹಳ್ಳಕ್ಕೆ ಶಾಶ್ವತ ಪರಿಹಾರಕ್ಕೆ: ಶಾಸಕದ್ವಯರಾದ ಮುನೇನಕೊಪ್ಪ-ದೇಸಾಯಿ ಸಿಎಂಗೆ ಮನವಿ

Spread the love

ಬೆಳಗಾವಿ: ಪ್ರತಿವರ್ಷವೂ ಬೆಣ್ಣೆ ಹಳ್ಳ ಮತ್ತು ತುಪರಿಹಳ್ಳದಿಂದ ಸಮಸ್ಯೆಯಾಗುತ್ತಿದ್ದು, ಸಾರ್ವಜನಿಕರ ಆಸ್ತಿಪಾಸ್ತಿಗಳು ನಾಶವಾಗುತ್ತಿದ್ದು, ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕೆಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹಾಗೂ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದರು.

ಬೆಳಗಾವಿಯಲ್ಲಿ ನಡೆಯುತ್ತಿದ್ದ ಸಿಎಂ ಸಭೆಯಲ್ಲಿ ಮಾತನಾಡಿದ ಮುನೇನಕೊಪ್ಪ ಮತ್ತು ದೇಸಾಯಿ, ಪ್ರತಿ ವರ್ಷವೂ ಸಾವಿರಾರೂ ಕೋಟಿಯ ಮನೆ- ಬೆಳೆ ನಾಶವಾಗುತ್ತಿರುವುದು ಈ ಹಳ್ಳಗಳಿಂದ. ಇವುಗಳಿಗೆ ನಿರ್ಧಿಷ್ಟ ಕ್ರಮವನ್ನ ಜರುಗಿಸಿ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ಕೋರಿದರು.

ಶಾಸಕ ಅರವಿಂದ ಬೆಲ್ಲದ, ಮಳೆಯ ಪ್ರಮಾಣ ತಿಳಿಯಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ. ಹುಬ್ಬಳ್ಳಿ-ಧಾರವಾಡ ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹಿಸಿದರು.

ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ,ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ಅವರು ಪ್ರವಾಹ‌ ನಿರ್ವಹಣೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದರು.

ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಜಿಲ್ಲೆಯ ಇನ್ನೂ 9 ಸಾವಿರ ಮನೆಗಳನ್ನು ಪರಿಹಾರದ ಪಟ್ಟಿಗೆ ಸೇರ್ಪಡೆ ಮಾಡಿ ವಿವಿಧ ಕಂತುಗಳ ಬಿಡುಗಡೆ ಮಾಡಲು ವಿನಂತಿಸಿದರು.

ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ, ಬೆಳೆವಿಮೆಯಲ್ಲಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ನಡುವೆ ಪ್ರತಿವರ್ಷ ವ್ಯತ್ಯಾಸ ಕಂಡುಬರುತ್ತಿದೆ. ಇದನ್ನು ಸರಿಪಡಿಸಲು ಮನವಿ ಮಾಡಿಕೊಂಡರು.

ಶಾಸಕ ಮಹಾದೇವಪ್ಪ ಯಾದವಾಡ, ಕಳೆದ ಬಾರಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಭಯ್ ಪಾಟೀಲ ಮಾತನಾಡಿ, ಬೆಳಗಾವಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ 320 ಕೋಟಿ ರೂಪಾಯಿ ರಸ್ತೆ ಅಭಿವೃದ್ಧಿಗೆ ಅಗತ್ಯವಿದೆ. ಕಳೆದ ವರ್ಷ ಹಾನಿಗೊಳಗಾದ ಮನೆಗಳ ಮರು ಸಮೀಕ್ಷೆ ನಡೆಸಿ ಲಾಗಿನ್ ಆಗಲು ಅನುಕೂಲ ಕಲ್ಪಿಸಬೇಕು. ನಗರೋತ್ಥಾನ ಯೋಜನೆ ಅನುದಾನ ತಕ್ಷಣ ಬಿಡುಗಡೆಗೆ ಒತ್ತಾಯಿಸಿದರು.

ಮಹೇಶ್ ಕುಮಠಳ್ಳಿ, ಅಥಣಿ ಮತಕ್ಷೇತ್ರದಲ್ಲಿ ಬೆಳೆಹಾನಿ ಮತ್ತು ಮನೆ ಪರಿಹಾರ ಇನ್ನೂ ಪಾವತಿಸುವುದು ಬಾಕಿಯಿದೆ. ರಸ್ತೆಗಳು ಹಾಳಾಗಿರುವುದರಿಂದ ತುರ್ತಾಗಿ 50-60 ಕೋಟಿ ಬಿಡುಗಡೆಗೆ ಆಗ್ರಹಿಸಿದರು.

ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೆರೆಗಳು ಹಾಗೂ ಬಾಂದಾರಗಳು ಒಡೆದಿರುವುದರಿಂದ ಬೆಳೆ ಕೂಡ ಹಾನಿಯಾಗಿದೆ. ಆದ್ದರಿಂದ ಇವುಗಳ ಶಾಶ್ವತ ದುರಸ್ತಿಗೆ ಮತ್ತು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಶಾಸಕ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಸ್ಥಿತಿ ಮತ್ತು ನಿರ್ವಹಣೆಯ ಸ್ಥಿತಿಗತಿಗಳನ್ನು ವಿವರಿಸಿದರು. ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಅತ್ಯಂತ ಮುತುವರ್ಜಿಯಿಂದ ಮಹಾರಾಷ್ಟ್ರ ಸರ್ಕಾರದ ಜತೆ ಸಮನ್ವಯ ಸಾಧಿಸಿದ್ದರಿಂದ ಪ್ರವಾಹ ನಿರ್ವಹಣೆ ಸಾಧ್ಯವಾಯಿತು. ಪ್ರವಾಹ ನಿರ್ವಹಣೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಮ್ಮ ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳ ಜತೆ ಸತತ ಸಂಪರ್ಕದಲ್ಲಿ ಇದ್ದ ಪರಿಣಾಮ ಯಾವುದೇ ತೊಂದರೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲೆಯಲ್ಲಿ ಬೀಜ, ಗೊಬ್ಬರ ಸಮರ್ಪಕವಾಗಿ ವಿತರಿಸಲಾಗಿದ್ದು, ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದರು. ಧಾರವಾಡ ಜಿಲ್ಲೆಯ ಮಾಹಿತಿಯನ್ನು ಅಲ್ಲಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಸಚಿವ ಶ್ರೀಮಂತ ಪಾಟೀಲ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಪಿ.ರಾಜೀವ್, ದುರ್ಯೋಧನ ಐಹೊಳೆ, ಉಮೇಶ್ ಕತ್ತಿ, ಮಹಾಂತೇಶ ಕೌಜಲಗಿ, ಶಾಸಕ ಅನಿಲ್ ಬೆನಕೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಎಲ್.ಅತೀಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಸಭೆಯ ನಂತರ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರು  ಬೆಳಗಾವಿ, ಬಾಗಲಕೋಟೆ  ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಮಂಗಳವಾರ ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲಿಸಿದರು.


Spread the love

Leave a Reply

Your email address will not be published. Required fields are marked *