ಮುದ್ದು ಮಾದಪ್ಪನ ದರ್ಶನ: ಕಾತುರದಲ್ಲಿದ್ದಾರೆ ಲಕ್ಷಾಂತರ ಭಕ್ತರು

ಚಾಮರಾಜನಗರ: ಇನ್ನೆರಡು ದಿನದಲ್ಲಿ ಮುದ್ದುಮಾದಪ್ಪನ ದರ್ಶನ ಭಾಗ್ಯ ದೊರೆಯುವ ಲಕ್ಷಣಗಳಿದ್ದು, ಆನ್ ಲೈನ್ ನಲ್ಲಿ ಮಾದಪ್ಪನ ದರ್ಶನ ಮಾಡಿಸಿ ಪೋಸ್ಟ್ ಮೂಲಕ ಪ್ರಸಾದ ದೊರೆಯುವ ಸಾಧ್ಯತೆಯಿದೆ.
ಎಲ್ಲವೂ ಓಕೆ ಆದರೆ ಆನ್ ಲೈನ್ ಮೂಲಕ ಏಳುಮಲೆ ಒಡೆಯ ಮಲೆ ಮಹದೇಶ್ವರನ ದರ್ಶನ ಇನ್ನು ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟವೂ ಕೂಡ ಆನ್ ಲೈನ್ ದರ್ಶನಕ್ಕೆ ಮುಂದಡಿಯಿಟ್ಟಿದೆ. ಈಗಾಗಲೇ ಟ್ರಯಲ್ ನಡೆಸಲಾಗುತ್ತಿದ್ದು, ತಾಂತ್ರಿಕವಾಗಿ ಎಲ್ಲಾ ಸರಿ ಹೋಗಿದ್ದು ಮಲೆಮಹದೇಶ್ವರ ಬೆಟ್ಟ ಅಧಿಕೃತ ವೆಬ್ ಸೈಟಿನಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಉಚಿತವಾಗಿ ಆನ್ ಲೈನ್ ಮೂಲಕ ದರ್ಶನವಾಗಲಿದೆ.
ಬೆಳಗ್ಗಿನ ಅಭಿಷೇಕ ಸಮಯ 4.30- 6 ಗಂಟೆ ಸಂಜೆ 6.45 ರಿಂದ 8 ರ ವರೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ವಾಮಿಯ ಪೂಜೆಯ ನೇರಪ್ರಸಾರ ಮಾಡಲು ಸಿದ್ದತೆ ನಡೆದಿದೆ. ಆನ್ ಲೈನ್ ಮೂಲಕವೇ ಭಕ್ತಾದಿಗಳು ಸೇವಾ ಚೀಟಿ ಪಡೆದು ಅವರ ಹೆಸರಿನಲ್ಲಿ ಪೂಜೆ ಮಾಡಿಸಬಹುದು.
ವಿಶೇಷವಾಗಿ ರಾಜ್ಯದ ಭಕ್ತಾದಿಗಳು ಸೇವೆ ಮಾಡಿಸಿದರೇ ಅಂಚೆ ಮೂಲಕ ಕಲ್ಲುಸಕ್ಕರೆ, ದ್ರಾಕ್ಷಿ, ವಿಭೂತಿ ಹಾಗೂ ಬಿಲ್ವಪತ್ರೆಯನ್ನು ರವಾನೆ ಮಾಡಲಾಗುವುದು. ಇದು ರಾಜ್ಯದ ಭಕ್ತಾದಿಗಳಿಗೆ ಮಾತ್ರ, ಬೇರೆ ರಾಜ್ಯದ ಭಕ್ತರಿಗೆ ಅಂಚೆ ಪ್ರಸಾದ ಇಲ್ಲ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.