ತ್ಯಾಗಕ್ಕೆ ಬೆಲೆ ಯಾವಾಗ ಸಿಗುತ್ತೋ.. ಕಾದು ನೋಡುವಾ: ಮಾಜಿ ಸಚಿವ ಎಂಟಿಬಿ ನಾಗರಾಜ
1 min readಬೆಂಗಳೂರು: ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಆ ತೀರ್ಮಾನಕ್ಕೆ ನಮ್ಮ ಒಪ್ಪಿಗೆಯಿದೆ. ತ್ಯಾಗಕ್ಕೆ ಬೆಲೆ ಸಿಗುವ ಸಮಯ ಬಂದಾಗ ಸಿಗುತ್ತದೆ, ಅದಕ್ಕೆ ಕಾದು ನೋಡಬೇಕು. ಇನ್ನೂ ಕಾಯುವ ತಾಳ್ಮೆ ಶೇ.100 ರಷ್ಟು ಇದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಜನರಲ್ ಎಲೆಕ್ಷನ್ ಬೇಕಾದರೂ ಬರಲಿ, ಅದಕ್ಕೂ ಬೇಕಾದರೂ ಒಂದು ಸಲ ನಿಂತು ಬಿಡೋಣ. ಕೊಟ್ಟ ಮಾತು ಭರವಸೆ ಈಡೇರಿಸಿದ್ದಾರೆ. ಉಪ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೊಟ್ಟಿದ್ದಾರೆ, ನಾವು ಸೋತಿದ್ದೇವೆ. ಕೆಲವು ಕಾರಣಗಳಿಂದ ನಾನು ಸೋತಿದ್ದೇನೆ, ಇಲ್ಲದಿದ್ದರೆ ನಾನು ಯಾಕೆ ಸೋಲುತ್ತಿದ್ದೆ?. ಎಂಟಿಬಿಯನ್ನು ಸೋಲಿಸಬೇಕು ಅಂತಾ ಸಿದ್ದರಾಮಯ್ಯ ನಮ್ಮ ಜಾತಿಯವರನ್ನೇ ತಂದು ನಿಲ್ಲಿಸಿದ್ರು. ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಎಲ್ಲಾ ಪ್ರಯತ್ನ ಪಟ್ಟರು. ಇಲ್ಲಿ ಬಚ್ಚೇಗೌಡರು ಮತ್ತು ಅವರ ಮಗ ಯಡಿಯೂರಪ್ಪ ಜೊತೆ ಒಪ್ಪಿಕೊಂಡು ಹೋಗಿ ಕೊನೆಗೆ ರಿವರ್ಸ್ ಆದರು. ಸೋಲಿಸಿದ್ದು ಬಿಜೆಪಿಯವರಲ್ಲ, ಬಚ್ಚೇಗೌಡ ಮತ್ತು ಮಗ ಎಂದರು.
ಕ್ರಮ ತೆಗೆದುಕೊಳ್ಳಬೇಕು ಅಂತಾ ಹೇಳಿದ್ದೇನೆ, ಪಕ್ಷ ಏನು ಮಾಡುತ್ತದೋ ನೋಡೋಣ. ರಾಜಕಾರಣದಲ್ಲಿ ಸೋಲು, ಗೆಲುವು, ಅಧಿಕಾರ ಎಲ್ಲಾ ಸಾಮಾನ್ಯ. ಮುಂದೆ ಏನಾಗುತ್ತದೆ ಎಂಬುದನ್ನು ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹಿಂದೆ ಹೇಳಿದ್ದೆ, ಈಗಲೂ ಹೇಳುತ್ತೇನೆ. ವಿಧಾನ ಪರಿಷತ್ ಗೆ ಹೋಗುವುದು ಹಣೆಬರಹದಲ್ಲಿ ಬರೆದಿದ್ರೆ ಆಗುತ್ತದೆ, ಇಲ್ಲದಿದ್ದರೆ ಆಗಲ್ಲ. ಹಣೆ ಬರೆಹದಲ್ಲಿ ಬರೆದಿರಬೇಕು, ದೇವರ ಅನುಗ್ರಹ, ಪಕ್ಷದ ಮುಖಂಡರ ಆಶೀರ್ವಾದ ಇದ್ದಲ್ಲಿ ಮಾತ್ರ ಎಲ್ಲವೂ ಸಿಗುತ್ತದೆ. ಏನಾಗುತ್ತದೆ ಅಂತಾ ಮುಂದೆ ನೋಡೋಣ. ಬಿಜೆಪಿಯವರು ಸೋಲಿಸಿದ್ದಾರೆ ಅಂತಾ ನಾನು ಎಲ್ಲೂ ಹೇಳಿಲ್ಲ. ಏನೇನು ಆಗುತ್ತದೋ ಆಗಲಿ ಎಂದರು.