ಕೋತಿ ಮರಿಗೆ ಜೀವದಾನ ಮಾಡಿದ ಮಂಜುನಾಥ: ತಾಯಿ ಪ್ರೀತಿಯಿಂದ ಬದುಕಿದ ಪ್ರಾಣಿ
1 min readಹುಬ್ಬಳ್ಳಿ: ತನ್ನ ಪುಟ್ಟ ಪುಟ್ಟ ಕಣ್ಣುಗಳಿಂದ ಅತ್ತಿತ್ತ ನೋಡುವ ತವಕ, ತಾನು ಎಲ್ಲಿದ್ದೇನೆ ಎಂಬ ಅರಿವಿಲ್ಲದೆ ಇರುವ ಮುಗ್ದ ಜೀವ ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯ ಮಡಿಲಲ್ಲಿ ಆಡಿ ನಲಿಯಬೇಕಿದ್ದ ಪುಟ್ಟ ಕೋತಿ ಮರಿಯೊಂದು ಅಪಘಾತದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡು ಇಂದು ವ್ಯಕ್ತಿಯೊಬ್ಬರ ಆಶ್ರಯದಲ್ಲಿ ತಾಯಿಯ ಪ್ರೀತಿಯನ್ನು ಪಡೆಯುತ್ತಿದೆ.
ಹೌದು, ಕೋತಿಯ ಮರಿಗೆ ತಮ್ಮ ಮನೆಯ ಮಕ್ಕಳಂತೆ ಕಾಳಜಿ ಮಾಡುತ್ತಾ ಅದಕ್ಕೆ ಹಾಲು ಕುಡಿಸಿ ಬದುಕಿಸಿದವರೇ ಮಂಜುನಾಥ ಮುತ್ತಗಾರ. ಹುಬ್ಬಳ್ಳಿಯ ಗಬ್ಬೂರ ನಿವಾಸಿ, ನಿನ್ನೆ ಬೇರೆ ಊರಿಗೆ ಹೋಗಿ ಬರುವಾಗ ರಸ್ತೆಯಲ್ಲಿ ಕೋತಿಗೆ ಅಪಘಾತವಾಗಿ ತಾಯಿ ಕೋತಿ ಸ್ಥಳದಲ್ಲೇ ಮೃತಪಟ್ಟಿತ್ತು ಅಲ್ಲೇ ತಾಯಿ ಕೋತಿಯ ಬಳಿ ಮರಿ ಕೋತಿ ಕಿರುಚಾಡುತ್ತಾ ತಾಯಿಯನ್ನು ಎಬ್ಬಿಸುವ ಪ್ರಯತ್ನ ಮಾಡುವ ದೃಶ್ಯ ಇವರ ಕಣ್ಣಿಗೆ ಬಿದ್ದಿತ್ತು. ಕೂಡಲೇ ಕೋತಿ ಮರಿಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಅದಕ್ಕೆ ಚಿಕಿತ್ಸೆ ಕೊಡಿಸಿ ತಮ್ಮ ಮನೆಯಲ್ಲೇ ಇಟ್ಟುಕೊಂಡು ಜೋಪಾನ ಮಾಡುತ್ತಿದ್ದಾರೆ.