“ಶಾಸಕ ಅಬ್ಬಯ್ಯ” ನೇತೃತ್ವದಲ್ಲಿ ಪಕ್ಷಕ್ಕೆ ಮರು ಸೇರ್ಪಡೆಗೊಂಡ “ಮೋಹನ ಅಸುಂಡಿ”…
1 min readಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮೋಹನ ಅಸುಂಡಿ ಅವರ ಅಮಾನತ್ತನ್ನು ರದ್ದು ಪಡಿಸಿದ ಪ್ರದೇಶ ಕಾಂಗ್ರೆಸ್ ಸಮಿತಿ ಅವರನ್ನ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಂಡಿದೆ.
ಇಲ್ಲಿನ ಹೊಟೇಲವೊಂದರಲ್ಲಿ ಜರುಗಿದ ಪಕ್ಷದ ಮುಖಂಡರ ಸಭೆಯಲ್ಲಿ ಮೋಹನ ಅಸುಂಡಿ ಅವರ ಅಮಾನತ್ತು ರದ್ದು ಪಡಿಸಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ, ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೋಹನ ಅಸುಂಡಿ ಅವರಿಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಇತ್ತೀಚಿಗೆ ಜರುಗಿದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೋಹನ ಅಸುಂಡಿ ಅವರು 82 ನೇ ವಾರ್ಡ್ ನಿಂದ ಸ್ಪರ್ಧಿಸಲು ತಮ್ಮ ಪತ್ನಿ ಅಕ್ಷತಾ ಮೋಹನ ಅಸುಂಡಿ ಅವರಿಗೆ ಟಿಕೆಟ್ ಕೇಳಿದ್ದರು. ಪಕ್ಷದ ಬಹುತೇಕ ವರಿಷ್ಠರು ಒಪ್ಪಿಗೆ ನೀಡಿದ್ದರೂ ಶಾಸಕ ಪ್ರಸಾದ ಅಬ್ಬಯ್ಯ ಅವರು ವಿರೋಧ ವ್ಯಕ್ತಪಡಿಸಿ ಮೋಹನ ಅಸುಂಡಿ ಅವರಿಗೆ ಟಿಕೆಟ್ ತಪ್ಪಿಸಿದ್ದರು ಹಾಗೂ ತಮ್ಮ ‘ಕಾರ್ಯ’ಕರ್ತರೊಬ್ಬರಿಗೆ ಟಿಕೆಟ್ ಕೊಡಿಸಿ ಚುನಾವಣಾ ಕಣದಲ್ಲಿ ತಾವೇ ಧುಮುಕಿದ್ದರು.
ವಾರ್ಡ್ 82 ರ ಪಾಲಿಕೆ ಚುನಾವಣೆ ಮೋಹನ ಅಸುಂಡಿ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರ ಮಧ್ಯೆದ ಚುನಾವಣೆಯಾಗಿ ಏರ್ಪಟ್ಟಿತ್ತು. ಅದರಲ್ಲಿ ವ್ಯಾಪಕ ಜನಬೆಂಬಲ ಹೊಂದಿದ್ದ ಮೋಹನ ಅಸುಂಡಿ ಅವರು ತಮ್ಮ ಪತ್ನಿ ಅಕ್ಷತಾ ಪಕ್ಷೇತರ ಅಭ್ಯರ್ಥಿ ಯಾಗಿ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವಂತೆ ಶ್ರಮ ವಹಿಸಿ ಯಶಸ್ವಿಯಾಗಿದ್ದರೆಂಬುದು ಈಗ ಇತಿಹಾಸ.