ಶಾಸಕ ಅಮೃತ ದೇಸಾಯಿ ಹೆಸರಲ್ಲಿ ಹಣ ಲೂಟಿ- ಸರಕಾರದ ರೊಕ್ಕ, ಸಾರ್ವಜನಿಕರಿಂದ ಚಂದಾ…!
1 min readಶಾಸಕ ಅಮೃತ ದೇಸಾಯಿ ಹೆಸರಲ್ಲಿ ಅನೇಕರು ಅಂಗಡಿಯನ್ನ ತೆಗೆದುಕೊಂಡು ಕೂತಿದ್ದು, ಹಣ ಸಿಗುವ, ಜಾಗ ಸಿಗುವ ಸ್ಥಳದಲ್ಲಿ ಹಣದ ಲೂಟಿ ನಡೆಯುತ್ತಿದೆ. ಶಾಸಕ ದೇಸಾಯಿಯವರ ಹೆಸರು ಬಂದರೇ, ಅವರನ್ನೇ ನೇರವಾಗಿ ಹೋಗಿ ಭೇಟಿಯಾಗಿ ಹಣವನ್ನಾಗಲಿ, ಭೂಮಿಯನ್ನಾಗಲಿ ಕೊಡುವುದು ಒಳಿತಲ್ಲವೇ..
ಧಾರವಾಡ: ಶಾಸಕ ಅಮೃತ ದೇಸಾಯಿ ಅವರ ಹೆಸರಿನಲ್ಲಿ ಧಾರವಾಡ ನಗರದಲ್ಲಿ ಹಣವನ್ನ ಲೂಟಿ ಮಾಡಲಾಗುತ್ತಿದೆ. ಕೆಲವರು ಬಡಾವಣೆಗಳಲ್ಲಿ ಹಣವನ್ನ ನಿವಾಸಿಗಳಿಂದ ಪೀಕಿ, ನಂತರ ಶಾಸಕರಿಂದ ಅನುದಾನ ಹಾಕಿಸಿಕೊಂಡು ಬಂದು ಪೂಜೆ ಮಾಡಿಸಿ, ಜನರ ಹಣ ತಿನ್ನುವಲ್ಲಿ ಮುಂದಾಗಿದ್ದಾರೆಂದು ಕರ್ನಾಟಕವಾಯ್ಸ್.ಕಾಂಗೆ ಖಚಿತ ಮೂಲಗಳಿಂದ ಗೊತ್ತಾಗಿದ್ದು, ಉದ್ದೇಶಪೂರ್ವಕವಾಗಿಯೇ ಶಾಸಕರನ್ನ ಹೆಸರನ್ನ ಕೆಡಿಸಲು ಕೆಲವರು ಮುಂದಾಗಿದ್ದಾರೆಂದು ಹೇಳಲಾಗಿದೆ.
ಧಾರವಾಡದ ಸಾಯಿ ಗಣೇಶ ಲೇ ಔಟ್ ಮತ್ತು ಡಾ.ಅಬ್ದುಲ ಕಲಾಂ ಕಾಲೋನಿಯಲ್ಲಿ ರಸ್ತೆ ಮಾಡಿಸುವುದಾಗಿ ಒಂದು ಮನೆಯಿಂದ 20 ಸಾವಿರ ರೂಪಾಯಿಗಳನ್ನ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ವ್ಯಕ್ತಿಯೇ ಮನೆಯಲ್ಲಿಯೇ ಪಡೆಯಲಾಗಿದೆ. ಇದರಿಂದ ಸಂಗ್ರಹವಾದ ಹಣದಿಂದಲೇ ರಸ್ತೆ ಮಾಡುವುದಾಗಿ ಹೇಳಿದ್ದ, ನಂತರ ಶಾಸಕರ ಅನುದಾನದಲ್ಲಿ 6 ಲಕ್ಷ ರೂಪಾಯಿ ಹಾಕಿಸಿಕೊಂಡು ಬಂದು ಕಾಮಗಾರಿ ಆರಂಭಿಸಿದ್ದಾರೆ.
ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆಯ ಮಾಜಿ ಸದಸ್ಯ ಶಂಕರ ಶೇಳಕೆ ಸೇರಿದಂತೆ ಹಲವರು ಹಣ ಸಂಗ್ರಹಿಸಿದ ರಸ್ತೆಯನ್ನ ಪೂಜೆಯನ್ನ ಮಾಡಿ, ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಸೋಜಿಗವೆಂದರೇ, ರಸ್ತೆಯ ಪೂಜೆ ನಡೆಯುತ್ತಿದ್ದಾಗಲೂ ಹಣವನ್ನ ಪಡೆದಿರುವ ಬಗ್ಗೆ ಮುಖಂಡರಿಗೆ ಹೇಳದೇ ಪೂಜೆ ಮಾಡಿಸಿದ್ದು ಸಂಶಯ ಮೂಡಿದೆ.
ಇದೀಗ ಜಯಲಕ್ಷ್ಮೀ ಚಿಕ್ಕಮಠ ಅನ್ನೋರು, ತಮ್ಮ ಫೇಸ್ ಬುಕ್ ಪೇಜಿನಲ್ಲಿ ಶಾಸಕರ ಬಗ್ಗೆ ಸಾಕಷ್ಟು ರೀತಿಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಕಾಮಗಾರಿ ನಡೆಯುತ್ತಿರುವುದು ಶಾಸಕರ ಹಣದಿಂದಲೇ ಎಂದು ಹೇಳಿದ್ದಾರೆ. ಹಾಗಾದರೇ, ಸಾರ್ವಜನಿಕರಿಂದ ಪಡೆದ ಹಣ ಎಲ್ಲಿ ಹೋಯಿತು. ಬರೋಬ್ಬರಿ 10 ಲಕ್ಷ ರೂಪಾಯಿ ತಿಂದಿದ್ದು ಯಾರೂ..
ಶಾಸಕ ಅಮೃತ ದೇಸಾಯಿಯವರೇ, ನೀವೂ ದೇಸಗತಿ ಕುಟುಂಬದಿಂದ ಬಂದವರು. ನೂರಾರೂ ರೈತರಿಗೆ ಆಸ್ತಿಯನ್ನ ದಾನ ಮಾಡಿದ್ದೀರಿ. ಇದೀಗ ನಿಮ್ಮ ದೀಪದ ಕೆಳಗೆ ಕತ್ತಲು ಆವರಿಸಿಕೊಳ್ಳುತ್ತಿದೆ ನೋಡಿ. ಇವರು ನಿಮ್ಮನ್ನ ಮತ್ತೂ ನಿಮ್ಮ ಹೆಸರನ್ನ ಬೀದಿಯಲ್ಲಿ ಲಕ್ಷ ಲಕ್ಷಕ್ಕೆ ಹರಾಜು ಹಾಕುತ್ತಿದ್ದಾರಾ ನೋಡಿ.. ಇದೇಲ್ಲಕ್ಕಿಂತ ಮೊದಲು ಹಣ ಕೊಟ್ಟವರ ಹಣವನ್ನ ಮರಳಿಸಲು ಹೇಳಿ.. ಪುಣ್ಯಕಟ್ಟಿಕೊಳ್ಳಿ… ಕೊರೋನಾ ಟೈಮಿನಲ್ಲಿ ಅಂಗಡಿ ತೆಗೆದು ಕೂತಿರುವ ನಿಮ್ಮ ಆಪ್ತರಿಗೆ ಚಾಟಿಯೇಟು ಬೀಸುತ್ತಿರಾ ಅಥವಾ ನಿಮ್ಮ ಹೆಸರನ್ನ ಹರಾಜು ಮಾಡಲು ಬೀಡ್ತೀರಾ.. ಕಾಲವೇ ಉತ್ತರಿಸಬೇಕಿದೆ..