ರಮ್ಯ ರೆಸಿಡೆನ್ಸಿಯಲ್ಲಿ ಮತ್ತೆ ಅವ್ಯವಹಾರ: ಶಾಸಕ ಅರವಿಂದ ಬೆಲ್ಲದ ಗೃಹ ಸಚಿವರಿಗೆ ಪತ್ರ…!

ಧಾರವಾಡ: ತಾಲೂಕಿನ ಜೋಗೆಲ್ಲಾಪುರ ಗ್ರಾಮದ ಸಮೀಪದ ಹುಬ್ಬಳ್ಳಿ-ಧಾರವಾಡ ಬೈಪಾಸ್ ಗೆ ಅಂಟಿಕೊಂಡಿರುವ ರಮ್ಯ ರೆಸಿಡೆನ್ಸಿಯಲ್ಲಿ ಮತ್ತೆ ಅವ್ಯವಹಾರದ ಚಟುವಟಿಕೆಗಳು ಆರಂಭವಾಗಿದ್ದು, ಅದನ್ನ ತಡೆಗಟ್ಟಬೇಕೆಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನ ಬರೆದಿದ್ದಾರೆ.

ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಮ್ಯ ರೆಸಿಡೆನ್ಸಿಯಲ್ಲಿ ಈ ಹಿಂದೆ ನಡೆಯುತ್ತಿದ್ದ ಅವ್ಯವಹಾರ ಮತ್ತು ಅನೈತಿಕ ಚಟುವಟಿಕೆಗಳನ್ನ ತಡೆಗಟ್ಟಿದ್ದಕ್ಕೆ ಮೊದಲು ಧನ್ಯವಾದ ತಿಳಿಸಿರುವ ಶಾಸಕ ಅರವಿಂದ ಬೆಲ್ಲದ, ಈಗ ಮತ್ತೆ ಅನೈತಿಕ ಅವ್ಯವಹಾರ ನಡೆಯುತ್ತಿದೆ ಎಂದು ಹೇಳಿದ್ದಾರೆ.

ರಮ್ಯ ರೆಸಿಡೆನ್ಸಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಕಾರ್ಯಕ್ರಮಕ್ಕೆ ಹೋದಾಗ ಸಾರ್ವಜನಿಕರು, ರಮ್ಯ ರೆಸಿಡೆನ್ಸಿಯಲ್ಲಿ ಮತ್ತೆ ಅವ್ಯವಹಾರ ಆರಂಭವಾಗಿರುವ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಖಾಯಂ ಆಗಿ ಅವ್ಯಹಾರ, ಅನೈತಿಕ ಚಟುವಟಿಕೆ ನಡೆಯದಂತೆ ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಾಸಕ ಅರವಿಂದ ಬೆಲ್ಲದ ವಿನಂತಿಸಿದ್ದಾರೆ.
ಕಳೆದ ದೀಪಾವಳಿ ಸಮಯದಲ್ಲಿ ರಮ್ಯ ರೆಸಿಡೆನ್ಸಿಯ ಬಳಿ ಹಲವರು ಜೂಜಾಟ ಆಡುತ್ತಿದ್ದ ಸಮಯದಲ್ಲಿ ಸಿಕ್ಕಿ ಬಿದ್ದಿದ್ದರು. ಅಷ್ಟೇ, ಅಲ್ಲ ಈ ಪ್ರಕರಣ ಹುಬ್ಬಳ್ಳಿ-ಧಾರವಾಡದಲ್ಲಿ ಸಾಕಷ್ಟು ಸದ್ದು ಮಾಡಿತ್ತು.