ಶಾಸಕ ಅಬ್ಬಯ್ಯಗೆ ಸೆಡ್ಡು ಹೊಡೆದ ಜೋಡೆತ್ತುಗಳು: ಮುಂದೇನು…!
1 min readಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಅವರೊಂದಿಗೆ ಒಂದು ಕಾಲದಲ್ಲಿ ಜೋಡೆತ್ತುಗಳಾಗಿ ಹಗಲಿರುಳು ಶ್ರಮಿಸಿದ್ದ ಹುಧಾಮನ ಪಾಲಿಕೆಯ ಮಾಜಿ ಸದಸ್ಯರುಗಳಾದ ಮೋಹನ ಅಸುಂಡಿ ಹಾಗೂ ನಜೀರ ಹೊನ್ಯಾಳ ಅವರೊಂದಿಗಿನ ರಾಜಕೀಯ ವೈಷಮ್ಯ ಪ್ರಸಾದ ಅಬ್ಬಯ್ಯ ಅವರ ವರ್ಚಸ್ಸಿಗೆ ಧಕ್ಕೆ ತಂದಂತಾಗಿದೆ.
ಅಬ್ಬಯ್ಯ ಅವರ ಮೊದಲ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ್ದ ಮೋಹನ ಅಸುಂಡಿ, ಶ್ರೀನಿವಾಸ ಮಾನೆ ಅವರ ಗುಂಪಿಗೆ ಸೇರಿದವರೆಂಬ ಕಾರಣಕ್ಕೆ ಅವರನ್ನು ರಾಜಕೀಯವಾಗಿ ಹಣಿಯಲು ಶತಾಗತಾಯ ಪ್ರಯತ್ನ ಮಾಡಿ, ಅಸುಂಡಿ ಅವರ ಪತ್ನಿಗೆ ವಾರ್ಡ್ ನಂ 82 ರ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೂ ಪಾಲಿಕೆ ಚುನಾವಣೆಯಲ್ಲಿ ತನ್ನ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಇನ್ಯಾವುದೇ ವಾರ್ಡ್ ಕ್ಕಿಂತ ಅತೀ ಹೆಚ್ಚು ಗಮನ ಹರಿಸಿ ವಾರ್ಡ್ ನಂ. 82 ರಲ್ಲಿ ಪ್ರಚಾರ ಮಾಡಿದ್ದಲ್ಲದೆ, ತನ್ನಿಂದಾಗಬಹುದಾದ ಎಲ್ಲ ಪ್ರಯತ್ನಗಳನ್ನು ಮಾಡಿ ಮೋಹನ ಅಸುಂಡಿ ಅವರ ಗೆಲುವಿನತ್ತದ ಓಟಕ್ಕೆ ಬ್ರೆಕ್ ಹಾಕಲು ಪ್ರಯತ್ನಿಸಿದ್ದರು. ಆದರೆ ಅಸುಂಡಿ ಅವರ ಪರ ಆ ವಾರ್ಡ್ ನ ಮತದಾರರು ಯಾವುದೇ ರೀತಿಯ ಒತ್ತಡಕ್ಕೊಳಗಾಗದೆ ಪ್ರಾಮಾಣಿಕವಾಗಿ ತಮ್ಮ ಪವಿತ್ರ ಮತದಾನದ ಹಕ್ಕನ್ನು ಚಲಾಯಿಸಿ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿದರು.
ಇನ್ನೊಂದೆಡೆ ನಜೀರ ಹೊನ್ಯಾಳ ಅವರನ್ನೂ ಕೂಡ ಮಾನೆ ಅವರ ಗುಂಪಿಗೆ ಸೇರಿದವರೆಂಬ ಕಾರಣಕ್ಕೆ ಅವರನ್ನು ಹೀಯಾಳಿಸಿ ಕಾಂಗ್ರೆಸ್ ಪಕ್ಷದಿಂದ ಹೊನ್ಯಾಳ ತಾವಾಗಿಯೇ ಹೊರಹೋಗುವಂತೆ ನೋಡಿಕೊಂಡರು. ಇದರಿಂದ ಅಕ್ರೋಶಭರಿತರಾದ ಹೊನ್ಯಾಳ ಹೈದ್ರಾಬಾದ್ ಗೆ ಹೋಗಿ AIMIM ಮುಖ್ಯಸ್ಥರನ್ನು ಭೇಟಿಯಾಗಿ ಆ ಪಕ್ಷಕ್ಕೆ ಹುಬ್ಬಳ್ಳಿಯಲ್ಲಿ ಮರುಜೀವ ನೀಡಿದರು. ಮುಸ್ಲಿಂ ಸಮಾಜದ ಅತ್ಯಂತ ಹೆಚ್ಚಿನ ಮತದಾರರು ಇರುವಂತಹ ಹುಬ್ಬಳ್ಳಿ ಶಹರ ಹಾಗೂ ಇತರ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಹೊನ್ಯಾಳ ಸ್ವತಃ ತಾವೇ ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ಪ್ರಯತ್ನ ಪ್ರಾರಂಭಿಸಿದರು. ಪಾಲಿಕೆ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿ ತರುವಲ್ಲಿ ಯಶಸ್ವಿಯಾದರು.
ಈ ಮೂಲಕ ಕಾಂಗ್ರೆಸ್ ಭದ್ರ ಬುನಾದಿಯಾಗಿದ್ದ ತನ್ನದೇ ಕ್ಷೇತ್ರದಲ್ಲಿ ಶಾಸಕ ಅಬ್ಬಯ್ಯ ತನ್ನ ಒಂದು ಕಾಲದ ಜೋಡೆತ್ತುಗಳನ್ನು ರಾಜಕೀಯವಾಗಿ ಮುಗಿಸಲು ಹೋಗಿ ಈಗ ತನ್ನ ಬುಡಕ್ಕೇ ಬೆಂಕಿ ಹಚ್ಚಿಕೊಂಡಂತಾಗಿದೆ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ.
ಶಾಸಕ ಅಬ್ಬಯ್ಯ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ, ಅವರು ಬಹಳ ಒಳ್ಳೆಯ ಗುಣದವರಿದ್ದಾರೆ. ಆದರೆ, ಅವರ ಸುತ್ತಮುತ್ತಲಿನ ಕೆಲ ರಾಜಕೀಯ ಗಂಧಗಾಳಿ ಗೊತ್ತಿಲ್ಲದ ಹಾಗೂ ಹಣಬಾಕು ಅನುಯಾಯಿಗಳ ಸುಳ್ಳು ಮಾತುಗಳನ್ನು ನಂಬಿ ಅಬ್ಬಯ್ಯ ತಮ್ಮ ಸುರಕ್ಷಿತ ಮತಕ್ಷೇತದಲ್ಲಿ ತಾವಾಗಿಯೇ ಈಗ ಅಸ್ಥಿರತೆ ಹುಟ್ಟಿಸಿಕೊಂಡಂತಾಗಿದೆ.
ಗಣೇಶ ಟಗರಗುಂಟಿ ಅವರ ಸೋಲು, ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮುಂತಾದವುಗಳನ್ನು ಉತ್ತರಿಸಲಾಗದ ಸ್ಥಿತಿಯಲ್ಲಿರುವ ಅಬ್ಬಯ್ಯ, ತನ್ನ ಹಳೆಯ ಜೋಡೆತ್ತುಗಳನ್ನು ಹೇಗೆ ಮನವೊಲಿಸಬಹುದು ಎಂಬುದು ಈಗ ಕಾಂಗ್ರೆಸ್ ಪಕ್ಷದಲ್ಲಿ ಅಷ್ಟೇ ಅಲ್ಲ, ಬೇರೆ ರಾಜಕೀಯ ಪಕ್ಷಗಳು ಕಾದು ನೋಡುವಂತಾಗಿದೆ.