ಸಿಎಂ ಆಡೀಯೋ ಸದ್ದಿಗೆ ಕಾರಣವಾದ ಕ್ಷೇತ್ರದ ಶಾಸಕ-ಪುತ್ರನಿಗೂ ಕೊರೋನಾ ಪಾಸಿಟಿವ್
ಯಾದಗಿರಿ: ಗುರುಮಿಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಕುರಿತು ಅವರ ಕಿರಿಯ ಪುತ್ರ ಶರಣಗೌಡ ಕಂದಕೂರ ಫೇಸ್ ಬುಕ್ ಮೂಲಕ ಮಾಹಿತಿ ಪೋಸ್ಟ್ ಮಾಡಿದ್ದಾರೆ.
ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಮತ್ತು ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ ರೆಡ್ಡಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಶರಣಗೌಡ ಕಂದಕೂರ ಫೇಸ್ಬುಕ್ ಮೂಲಕ ತಮ್ಮ ತಂದೆ ಹಾಗೂ ಸಹೋದರನಿಗೆ ಸೋಂಕು ತಗುಲಿದ ವಿಷಯ ವಿನಿಮಯ ಮಾಡಿಕೊಂಡಿದ್ದಾರೆ. ತಂದೆ ಹಾಗೂ ಸಹೋದರನಿಗೆ ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಸೋಂಕು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿಎಸ್ ವೈ ಆಡಿಯೋ ಪ್ರಕರಣದಲ್ಲಿ ಸದ್ದು ಮಾಡಿದ ಜೆಡಿಎಸ್ ಯುವ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ, ತಮ್ಮ ತಂದೆ ಹಾಗೂ ಸಹೋದರನ ಜೊತೆ ಸಂಪರ್ಕದಲ್ಲಿದ್ದವರೂ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.