ಶಾಸಕ ಶರತ್ ಬಚ್ಚೆಗೌಡ ಎಂಟೇ ದಿನದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆ

ಬೆಂಗಳೂರು: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಪುತ್ರ ಹಾಗೂ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಫೆಬ್ರವರಿ 26ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.

ಕಳೆದ ಕೆಲ ತಿಂಗಳುಗಳಿಂದ ಇವರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಹಲವು ಸುತ್ತಿನ ಚರ್ಚೆಯ ಬಳಿಕ ಇದೀಗ ಶರತ್ ಬಚ್ಚೇಗೌಡ, ಕಾಂಗ್ರೆಸ್ ಸೇರ್ಪಡೆಯಾಗುವ ದಿನಾಂಕ ನಿಗದಿಯಾಗಿದೆ. ಫೆ.26 ಕ್ಕೆ ಕಾಂಗ್ರೆಸ್ ಪಕ್ಷವನ್ನು ಶಾಸಕ ಶರತ್ ಬಚ್ಚೇಗೌಡ ಸೇರ್ಪಡೆ ಆಗಲಿದ್ದಾರೆಂದು ಹೇಳಲಾಗುತ್ತಿದೆ.
ದಿನಾಂಕಗಳು ನಿಗದಿಯಾಗಿಲ್ಲ. ಆದರೆ, ಫೆಬ್ರವರಿ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕು ಎಂದು ಕೊಂಡಿದ್ದೇನೆಂದು ಶರತ್ ಅವರು ತಿಳಿಸಿದ್ದಾರೆ. ನಿಮ್ಮ ನಿರ್ಧಾರಕ್ಕೆ ನಿಮ್ಮ ತಂದೆ ಬಚ್ಚೇಗೌಡ ಅವರು ಒಪ್ಪಿಗೆ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶರತ್ ಅವರು, ಎಲ್ಲಾ ವಿಚಾರಗಳು ಜನರಿಗೆ ತಿಳಿದಿದೆ. ತಂದೆಯವರಿಗೆ ನಾನು ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಎಲ್ಲವೂ ಅವರಿಗೆ ಗೊತ್ತಿದೆ ಎಂದಿದ್ದಾರೆ.
ಇದೇ ವೇಳೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪರೋಕ್ಷವಾಗಿ ಪುತ್ರನಿಗೆ ಬಚ್ಚೇಗೌಡ ಅವರು ಸಹಾಯ ಮಾಡಿದ್ದರು ಎಂಬ ಆರೋಪಗಳನ್ನು ಶರತ್ ತಳ್ಳಿಹಾಕಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ, ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ಟಿ.ಬಿ ನಾಗರಾಜ್ ವಿರುದ್ಧ ಸೋಲು ಕಂಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಎಂ.ಟಿ.ಬಿ ನಾಗರಾಜ್, ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ, ಶಾಸಕ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದರು.
ಹೊಸಕೋಟೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಟಿ.ಬಿ ನಾಗರಾಜ್, ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ವಿರುದ್ಧ ಪರಾಭವಗೊಂಡಿದ್ದರು. ಆದರೆ, ವಿಧಾನಪರಿಷತ್ ಸದಸ್ಯರಾಗಿ ಬಿಜೆಪಿಯಿಂದ ಆಯ್ಕೆಯಾದ ಎಂ.ಟಿ.ಬಿ ನಾಗರಾಜ್, ಇದೀಗ ಮತ್ತೆ ಸಚಿವರಾಗಿದ್ದಾರೆ.
ಶರತ್ ಅವರು ಕಾಂಗ್ರೆಸ್ ಸೇರಿದ ಬಳಿಕ, ಮಾಚ್೯ ಮೊದಲ ವಾರದಲ್ಲಿ ಹೊಸಕೋಟೆಯಲ್ಲಿ ಕಾಂಗ್ರೆಸ್ ಪಕ್ಷ, ಬೃಹತ್ ಸಮಾವೇಶ ನಡೆಸಲಿದ್ದು, ಈ ವೇಳೆ ತಮ್ಮ ಶಕ್ತಿ ಪ್ರದರ್ಶಿಸಲು ಶರತ್ ನಿರ್ಧರಿಸಿದ್ದಾರೆಂದು ಗೊತ್ತಾಗಿದೆ.