ಧಾರವಾಡದಲ್ಲಿ ಸಚಿವ ಸಂತೋಷ ಲಾಡ “ಮಿಂಚಿನ ಸಂಚಾರ”…
1 min readರಸ್ತೆ ದುರಸ್ತಿ ಹಾಗೂ ಸೇತುವೆ ಸ್ಥಳಾಂತರಕ್ಕೆ ಕ್ರಮ : ಸಚಿವ ಸಂತೋಷ ಲಾಡ್
ಧಾರವಾಡ: ಧಾರವಾಡ-ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಹತ್ತಿರವಿರುವ ರಾಷ್ಟ್ರೀಯ ಹೆದ್ದಾರಿ ಕೆಳಗಿನ ರಸ್ತೆ ತಿರುವು ದುರಸ್ತಿ ಮಾಡಿ ಸೇತುವೆ ಸ್ಥಳಾಂತರಗೊಳಿಸುವಂತೆ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಭುವನೇಶ್ ಅವರಿಗೆ ಸೂಚಿಸಿದರು.
ಸ್ಥಳೀಯರ ಅಹವಾಲಿನಂತೆ ಹೆದ್ದಾರಿ ಸೇತುವೆ ಕೆಳಗಿನ ರಸ್ತೆ ತಿರುವಿನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿರುವ ಕಾರಣ, ಸ್ಥಳಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಸಚಿವರು ರಸ್ತೆ ತಿರುವನ್ನು ನೇರವಾಗಿಸಿ ಸೇತುವೆಯನ್ನು ದುರಸ್ತಿಗೊಳಿಸಲು ಸ್ಥಳದಲ್ಲೇ ಇದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಬ್ಬೂರು-ನರೇಂದ್ರ ರಾಷ್ಟ್ರೀಯ ಹೆದ್ದಾರಿಯು ಸದ್ಯ ದ್ವಿಪಥ ಇದ್ದು, ಷಟ್ಪಥ (ಆರು ಲೇನ್) ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಯೋಜನೆಯಲ್ಲಿಯೇ ಧಾರವಾಡ-ಹಳಿಯಾಳ ರಸ್ತೆ ತಿರುವು ನೇರವಾಗಿಸಿ ಸೇತುವೆ ದುರಸ್ತಿ ಸಹ ಕೈಗೊಂಡಲ್ಲಿ ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ಸ್ಥಳೀಯರ ಆಗ್ರಹವಾಗಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆದ್ಯತೆ ಮೇರೆಗೆ ಪರಿಗಣಿಸುವಂತೆ ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಯೋಜನೆ ಅನುಷ್ಠಾನದಲ್ಲಿ ಸದರಿ ರಸ್ತೆ ತಿರುವನ್ನು ಪರಿಗಣಿಸಲು ಜಿಲ್ಲಾಡಳಿತದಿಂದ ಎಲ್ಲ ಒಪ್ಪಿಗೆ ನೀಡುವುದಾಗಿ ತಿಳಿಸಿದರು. ತಹಶೀಲ್ದಾರ್ ದೊಡ್ಡಪ್ಪ ಹೂಗಾರ ಉಪಸ್ಥಿತರಿದ್ದರು.