ದೇಶದಲ್ಲಿ “ಹಿಂದುಗಳಿಗೆ” ಇರೋವಷ್ಟೇ ಹಕ್ಕು “ಮುಸ್ಲಿಂರಿಗೂ” ಇದೆ: ಸಚಿವ ಲಾಡ ‘ಮಾಸ್ ಟಾಕ್’….

ಹಿಂದೂ-ಮುಸ್ಲೀಂ ಏಕತೆಯೇ ಭಾರತಕ್ಕೆ ಶ್ರೀರಕ್ಷೆ: ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ: ಭಾರತದ ಮೇಲೆ ಹಿಂದೂಗಳಷ್ಟೇ ಹಕ್ಕು ಮುಸ್ಲಿಂ ಸಮುದಾಯಕ್ಕಿದೆ. ದೇಶದಲ್ಲಿ ಎರಡೂ ಕೋಮುಗಳ ನಡುವೆ ಏನೆಲ್ಲಾ ವಿಷ ಬಿಜ ಬಿತ್ತಿದಾಗಲೂ ಕೂಡ, ಎರಡೂ ಕೋಮುಗಳು ಏಕತೆ ಕಾಪಾಡುವಲ್ಲಿ ಶ್ರಮ ವಹಿಸಿವೆ. ಹೀಗಾಗಿ ಮುಂದೆ ದೇಶಕ್ಕೆ ಒಳ್ಳೆಯ ಕಾಲ ಬರಲಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹೇಳಿದರು.
ಹಳೇಹುಬ್ಬಳ್ಳಿಯ ಅಸಾರ ಮೊಹಲ್ಲಾದಲ್ಲಿ ಈದ್ ಮಿಲಾದ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸಚಿವ ಸಂತೋಷ್ ಲಾಡ್ ಮಾತನಾಡಿದರು.
ಪೂರ್ಣ ವೀಡಿಯೋ ಇಲ್ಲಿದೆ..
ಜಮ್ಮು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ ಮುಸ್ಲಿಂ ಸಮುದಾಯಕ್ಕೆ ಭೂಮಿಯ ಒಡೆತನ ಸಮಾನವಾಗಿ ಹಂಚಿಕೆಯಾಗಿಲ್ಲ. ಆದಾಗ್ಯೂ ದೇಶದ ಅಭೀವೃದ್ದಿ ಮತ್ತು ಇತರೆ ವಲಯಗಳಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಕಡೆಗಣಿಸಲಾಗದು ಎಂದಿರುವ ಸಚಿವ ಸಂತೋಷ್ ಲಾಡ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರರಿಗೆ ರಾಜಕೀಯ ಮರುಜನ್ಮ ನೀಡಿದ್ದು ಅಂದಿನ ಮುಸ್ಲಿಂ ಲೀಗ್ ಪಕ್ಷ ಎಂದು ಇತಿಹಾಸದ ಕಥನವನ್ನು ನೆನಪು ಮಾಡಿಕೊಂಡರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ರವರು ಕಷ್ಟಕಾಲದಲ್ಲಿದ್ದಾಗ ಅವರ ಪರವಾಗಿ ಅಂದು ವಕಾಲತ್ತು ವಹಿಸಿದ್ದು ಆಸೀಫ್ ಅಲಿ ಎಂಬ ಭಾರತೀಯ ಮುಸ್ಲೀಂ ಎಂದು ಸಚಿವ ಸಂತೋಷ್ ಲಾಡ್ ನೆನಪಿಸಿದರು. ಯಾರು ಎಷ್ಟೇ ಹುಳಿ ಹಿಂಡಿದರೂ ಹಿಂದೂ ಮುಸ್ಲಿಂರ ನಡುವಿನ ಸಾಮರಸ್ಯವನ್ನು ಕದಡಲು ಸಾಧ್ಯವಿಲ್ಲ. ದೇಶದಲ್ಲಿ ಈಗ ಸೃಷ್ಟಿಸಲಾಗಿರುವ ವಾತಾವರಣ ಸರಿ ಇಲ್ಲದಿದ್ದರೂ ಮುಂದೆ ಒಳ್ಳೆಯ ದಿನಗಳನ್ನು ಮುಸ್ಲಿಂ ಸಮುದಾಯ ಕಾಣಲಿದೆ ಎಂದು ಸಚಿವ ಸಂತೋಷ್ ಲಾಡ್ ಆಶಾಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಪರಿಷತ್ ಸದಸ್ಯ ಜಗದೀಶ ಶೆಟ್ಟರ್, ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಹಳ್ಳೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.