Posts Slider

Karnataka Voice

Latest Kannada News

ಸಂತೋಷ ಲಾಡ್ “ಮಂತ್ರಿಗಿರಿ”ಗೆ ಕಳಂಕ ತರೋ ಯತ್ನಕ್ಕೀಳಿದ ಧಾರವಾಡ ಅರಣ್ಯಾಧಿಕಾರಿಗಳು- ಷಢ್ಯಂತ್ರ ಬಯಲು ಮಾಡಿದ “ಬಡವರ ಮಗ”…

Spread the love

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಧಾರವಾಡದ ಅರಣ್ಯಾಧಿಕಾರಿಗಳು ಮಾಡಿರುವ ಷಢ್ಯಂತ್ರವೊಂದನ್ನ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಪತ್ತೆ ಹಚ್ಚಿದ್ದು, ಅರಣ್ಯವನ್ನ ಹಾಳು ಮಾಡಿರುವುದು ಬಹಿರಂಗಗೊಂಡಿದೆ.

ಹೌದು… ಖಾಸಗಿ ವ್ಯಕ್ತಿಗಳ ಪರವಾಗಿ ಅರಣ್ಯ ಅಧಿಕಾರಿಗಳು ನಿಯಮಗಳನ್ನ ಉಲ್ಲಂಘನೆ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದನ್ನ ಪ್ರಶ್ನಿಸಲು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ಹೋದ ಕೆಲವೇ ಕ್ಷಣಗಳಲ್ಲಿ ಅಧಿಕಾರಿಗಳು ಕಣ್ಣಾಮುಚ್ಚಾಲೆ ಆಡಿರುವುದು ಕೂಡಾ ಬಹಿರಂಗವಾಗಿದೆ.

ಕಡಿ ಹಾಕಿದ್ದ ರಸ್ತೆಗೆ ಮತ್ತೆ ಮಣ್ಣು ಹಾಕಿಸಿದ ಅರಣ್ಯ ಅಧಿಕಾರಿಗಳು…

ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಬಣದೂರ ಬಳಿ ಅರಣ್ಯ ನಾಶ ಮಾಡಿ ರಸ್ತೆ ಮಾಡುತ್ತಿರುವ ಹಿಂದೆ ಸಚಿವ ಸಂತೋಷ ಲಾಡ ಅವರನ್ನ ವಿವಾದಕ್ಕೆ ಸಿಲುಕಿಸುವ ತಂತ್ರ ಅಡಗಿದೆ ಎಂದು ಹೇಳಲಾಗಿದೆ.

ಈ ವಿಷಯವಾಗಿ ನೀಡಿದ ಮನವಿ ಪತ್ರದ ವಿವರ…

ಇವರಿಗೆ
ಯತೀಶ ಕುಮಾರ,
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು,
ಧಾರವಾಡ ವೃತ್ತ ಧಾರವಾಡ.

ವಿಷಯ: ಧಾರವಾಡ ಅರಣ್ಯ ವಲಯದ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಟಾವಣೆ ಮಾಡಿ, ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿರುವ ಖಾಸಗಿ ವ್ಯಕ್ತಿಗಳು ಹಾಗೂ ಅದಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವ ಕುರಿತು.

ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯರಲ್ಲಿ ವಿನಂತಿಸಿಕೊಳ್ಳುವುದು
ಏನೆಂದರೆ,

ಧಾರವಾಡ ಅರಣ್ಯ ವಲಯದ ಬಣದೂರ ಶಾಖೆಯ ಹಳ್ಳಿಗೇರಿ ಹದ್ದಿನಲ್ಲಿನ ಕಾಯ್ದಿಟ್ಟ ಅರಣ್ಯ(Reserve Forest) ಸರ್ವೆ ನಂಬರ್ ೨೨ ರಲ್ಲಿ ಸುಮಾರು ನೂರಾರು ಸಾಗವಾನಿ, ಮತ್ತಿ ಇತರೆ ಜಾತಿಯ ಮರಗಳನ್ನು ಕಟಾವಣೆ ಮಾಡಿ ರಿಸರ್ವ್ ಫಾರೆಸ್ಟ್ ನಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

ಈಗಾಗಲೇ ನೂರಾರು ವಿವಿಧ ಜಾತಿಯ ಮರಗಳನ್ನು ಕಡೆದು ಹಾಕಿ ಸುಮಾರು ೧ ಕಿ.ಮೀ. ವರೆಗೆ ರಸ್ತೆ ನಿರ್ಮಾಣ ಮಾಡಿದ್ದು, ಇನ್ನು ರಸ್ತೆ ನಿರ್ಮಾಣದ ಕಾರ್ಯ ಮುಂದುವರೆದಿದೆ. ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಅಕ್ಷಮ್ಯ ಅಪರಾಧ.

ಖಾಸಗಿ ವ್ಯಕ್ತಿಗಳು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಶಾಮಿಲಾಗಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಹಾಗೂ ಬೆಲೆ ಬಾಳುವ ಮರಗಳನ್ನು ಕಡೆದು ಸಾಗಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆದ್ದರಿಂದ ಕೂಡಲೇ ಧಾರವಾಡ ವಲಯದ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ರಸ್ತೆ ನಿರ್ಮಾಣ ಮಾಡುತ್ತಿರುವಂತಹ ಖಾಸಗಿ ವ್ಯಕ್ತಿಗಳ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ ಕರ್ನಾಟಕ ಅರಣ್ಯ ಕಾಯ್ದೆ ೧೯೬೩ ಸೆಕ್ಷನ್ ೨೪ ರಂತೆ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಮರೆತು ರಾಜಕೀಯ ಒತ್ತಡದಿಂದ ರಸ್ತೆ ನಿರ್ಮಾಣ ಮಾಡಲು ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.
ಮತ್ತು ರಸ್ತೆ ನಿರ್ಮಿಸುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುಲು ತಮ್ಮಲ್ಲಿ ಈ ಮೂಲಕ ವಿನಂತಿಕೊಳ್ಳುತ್ತೇವೆ.

ಧನ್ಯವಾದಗಳೊಂದಿಗೆ.

ಸ್ಥಳ : ಧಾರವಾಡ
ದಿನಾಂಕ : ೨೮-೦೩-೨೦೨೫

ತಮ್ಮ ವಿಶ್ವಾಸಿ
ಅಡಕಗಳು
ಛಾಯಾಚಿತ್ರಗಳನ್ನು ಲಗತ್ತಿಸಲಾಗಿದೆ


Spread the love

Leave a Reply

Your email address will not be published. Required fields are marked *