Karnataka Voice

Latest Kannada News

ಸಚಿವ ಬೈರತಿ ಬಸವರಾಜರಿಗೆ ತಾತ್ಕಾಲಿಕ ನಿರಾಳ: ಸಮನ್ಸ್ ಗೆ ತಡೆಯಾಜ್ಞೆ..

Spread the love

ಸಚಿವ ಭೈರತಿಗೆ ಜಾರಿಯಾಗಿದ್ದ ಸಮನ್ಸ್‌ಗೆ ತಡೆಯಾಜ್ಞೆ ನೀಡಿದ ಧಾರವಾಡ ಹೈಕೋರ್ಟ್

ಧಾರವಾಡ: ಸಚಿವ ಭೈರತಿ ಬಸವರಾಜ ಅವರು ಅಕ್ರಮವಾಗಿ ಜಮೀನು ಖರೀದಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ಗೆ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ಕೆ.ಆರ್.ಪುರಂ ಹೋಬಳಿ ವ್ಯಾಪ್ತಿಯಲ್ಲಿ 22 ಎಕರೆ ಜಮೀನನ್ನು ಅಣ್ಣಯ್ಯಪ್ಪ ಎಂಬುವರಿಂದ 2003 ರಲ್ಲಿ ಕಾನೂನು ಬಾಹಿರವಾಗಿ ಭೈರತಿ ಬಸವರಾಜ್ ಅವರು ಖರೀದಿ ಮಾಡಿದ್ದಾರೆ ಎಂಬ ಆರೋಪವಿತ್ತು. ಈ ಕುರಿತು ಮಾದಪ್ಪ ಎಂಬುವವರು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲು ಮಾಡಿದ್ದರು. ನಂತರ ಪೊಲೀಸರು ವಿಚಾರಣೆ ಮಾಡಿ ಬಿ ರಿಪೋರ್ಟ್ ಹಾಕಿದ್ದರು. ಇದನ್ನು ಪ್ರಶ್ನಿಸಿ ಮಾದಪ್ಪನವರು, ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಪೊಲೀಸರ ಬಿ ರಿಪೋರ್ಟ್‌ನ್ನು ವಜಾಗೊಳಿಸಿ, ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಸಚಿವ ಭೈರತಿ ಬಸವರಾಜ ಸೇರಿ ಇತರರ ವಿರುದ್ಧ ಕ್ರಿಮಿನಲ್ ಅಪರಾಧ ಪ್ರಕರಣವನ್ನು ದಾಖಲಿಸಿಕೊಂಡು, ಸಮನ್ಸ್ ಜಾರಿಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಭೈರತಿ ಬಸವರಾಜ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಸಮನ್ಸ್‌ನ್ನು ರದ್ದುಗೊಳಿಸಿ, ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್‌ ಪೀಠ, ಕೆಳ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ಹಾಗೂ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಜನವರಿ 2ನೇ ವಾರಕ್ಕೆ ವಿಚಾರಣೆ ಮುಂದೂಡಿತು.


Spread the love

Leave a Reply

Your email address will not be published. Required fields are marked *