ಮಿಡ್‌ನೈಟ್ ರಸ್ತೆಯಲ್ಲಿ…’ ಹಾಡು ಬಿಡುಗಡೆ… ‘s/o ಮುತ್ತಣ್ಣ’ ಸಿನಿಮಾ

ಪ್ರಣಂ ದೇವರಾಜ್ – ಖುಷಿ ರವಿ ಅಭಿನಯದ ಈ ಚಿತ್ರ ಆಗಸ್ಟ್ 22 ರಂದು ತೆರೆಗೆ
ಪ್ರಣಂ ದೇವರಾಜ್ ಮತ್ತು ಖುಷಿ ರವಿ ನಟನೆಯ ‘s/o ಮುತ್ತಣ್ಣ’ ಚಿತ್ರದ ‘ಮಿಡ್‌ನೈಟ್ ರಸ್ತೆಯಲ್ಲಿ…’ ಸಾಂಗ್ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ರಚಿಸಿರುವ ಈ ಹಾಡಿಗೆ ಸಂಜಿತ್ ಹೆಗ್ಡೆ ದನಿಯಾಗಿದ್ದಾರೆ. ಪುರಾತನ ಫಿಲಂಸ್ ನಿರ್ಮಾಣದಲ್ಲಿ ಶ್ರೀಕಾಂತ್ ಹುಣಸೂರು ನಿರ್ದೇಶನದ ಚಿತ್ರವಿದು. ‘ನಮ್ಮ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಇಂದು ಎರಡನೇ ಹಾಡು ಬಿಡುಗಡೆಯಾಗಿದೆ. ಮೊದಲು ಹಾಡು ‘ಕಮ್ಮಂಗಿ ನನ್ ಮಗನೇ’ ಸಹ ಮೆಚ್ಚುಗೆ ಪಡೆದುಕೊಂಡಿದೆ. ಇಂದು ಬಿಡುಗಡೆಯಾಗಿರುವ ‘ಮಿಡ್‌ನೈಟ್ ರಸ್ತೆಯಲ್ಲಿ’ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಉಳಿದ ಎರಡು ಹಾಡುಗಳು ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದು ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಮಾಹಿತಿ ನೀಡಿದರು.
‘ಈ ಚಿತ್ರ ಅಪ್ಪ – ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿದೆ. ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್ ಅಪ್ಪ – ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖುಷಿರವಿ ಚಿತ್ರದ ನಾಯಕಿ. ಅಂದುಕೊಂಡ ಹಾಗೆ ಚಿತ್ರವನ್ನು ಪೂರ್ಣಗೊಳಿಸಲು ಚಿತ್ರತಂಡದ ಸಹಕಾರವೇ ಕಾರಣ. ಇನ್ನೂ ಈ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ವಾರಣಾಸಿಯಲ್ಲಿ ನಡೆದಿದೆ. ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡಿದ್ದ ಡೈನಾಮಿಕ್ ಸ್ಟಾರ್ ದೇವರಾಜ್, ಇತ್ತೀಚಿಗೆ ಸಿನಿಮಾ ನೋಡಿ ಪ್ರಶಂಸೆ ನೀಡಿದ್ದು ಬಹಳ ಖುಷಿಯಾಗಿದೆ’ ಎನ್ನುತ್ತಾರೆ ನಿರ್ದೇಶಕ ಶ್ರೀಕಾಂತ್ ಹುಣಸೂರು.
‘ನಿರ್ದೇಶಕರು ಕಥೆ ಹೇಳಿದ ರೀತಿಯೇ ಬಹಳ ಚೆನ್ನಾಗಿತ್ತು. ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಜೊತೆಗೆ ಪ್ರೇಮ ಕಥಾನಕವೂ ಹೌದು. ಈ ಚಿತ್ರದ ವಿಶೇಷವೆಂದರೆ ಇದರಲ್ಲಿ ಸಾಹಸ ಸನ್ನಿವೇಶಗಳಿಲ್ಲ. ನಿರ್ದೇಶಕರೂ ಮಾಡಿಕೊಂಡಿರುವ ಕಥೆ, ಚಿತ್ರಕಥೆ ಬಹಳ ಸೊಗಸಾಗಿದೆ. ರಂಗಾಯಣ ರಘು ಅವರಿಂದ ಸಾಕಷ್ಟು ಕಲಿತಿದ್ದೇನೆ. ಏಳುವರೆ ವರ್ಷಗಳ ನಂತರ ನನ್ನ ಸಿನಿಮಾ ಆಗಸ್ಟ್ 22 ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ’ ಎನ್ನುವುದು ಹೀರೋ ಪ್ರಣಂ ಮಾತು.