ದೇಶದ ಮೇಲೆ ದಂಡೆತ್ತಿ ಬಂತು ಮಿಡಿತೆಗಳ ಹಿಂಡು…! : ವಾರ್ತಾ ಇಲಾಖೆಯ ವೇಣುಗೋಪಾಲ ಬರೆದಿದ್ದಾರೆ ನೋಡಿ
1 min readಕೊರೋನಾ, ಅಂಫಾನ್ ಚಂಡಮಾರುತದ ತರುವಾಯ ದೇಶ ಮಿಡಿತೆ (Grasshopper) ಹಾವಳಿಗಳ ಸಂಕಷ್ಟಕ್ಕೆ ಈಡಾಗಿದೆ. ಆಫ್ರಿಕಾ ಮೂಲದ ಈ ಮರುಭೂಮಿ ಮಿಡಿತೆಗಳ ದಂಡು (Desert locust) ಪಾಕಿಸ್ತಾನವನ್ನು ದಾಟಿ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ರಕ್ಕಸ ನರ್ತನೆ ಆರಂಭಿಸಿವೆ, ಇವುಗಳ ಹೊಟ್ಟೆ ಬಾಕತನದಿಂದಾಗಿ ದೇಶದಲ್ಲಿ ಆಹಾರ ಕ್ಷಾಮ ತೆಲೆದೋರುವ ಸ್ಥಿತಿ ಬಂದು ಒದಗಿದೆ. ಕೇಂದ್ರ ಸರ್ಕಾರ ಹಲವು ರಾಜ್ಯಗಳಿಗೆ ಈಗಾಗಲೇ ಎಚ್ಚರಿಕೆಯ ಸಂದೇಶ ನೀಡಿದ್ದು, ಇವುಗಳ ಹಾವಳಿ ತಡೆಗಟ್ಟಲು ಸನ್ನದ್ಧವಾಗಿರುವಂತೆ ಸೂಚಿಸಿದೆ.
ಸಾಮಾನ್ಯ ಮಿಡಿತೆಯ ರಕ್ಕಸ ರೂಪಾಂತರ
ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಮಳೆ ಹಾಗೂ ಬಿಸಿಲು ಸಾಮಾನ್ಯ ಮಿಡಿತೆಗಳು ರಕ್ಕಸ ರೂಪಾಂತರ ಹೊಂದಲು ಮೂಲ ಕಾರಣವಾಗಿದೆ. ಆಫ್ರಿಕಾ ಖಂಡದಲ್ಲಿ ಕಂಡುಬರುವ ಸಿಸ್ಟೀಸೆರ್ಕಾ ( Schistocerca ) ಹೆಸರಿನ ಮಿಡಿತೆ ಲುಕಸ್ಟ ಸ್ವಾರ್ಮ್ (locust Swarm) ಸೃಷ್ಟಿಸುತ್ತದೆ. ಸಾಧಾರಣವಾಗಿ ಹಸಿರು ಹಾಗೂ ಕಂದು ಬಣ್ಣದಲ್ಲಿ ಚಿಕ್ಕ ಗಾತ್ರದಲ್ಲಿರುವ ಈ ಮಿಡಿತೆಗೆ ಹವಾಮಾನ ವೈಪರೀತ್ಯಗಳಿಂದ ಸೂಕ್ತವಾತವರಣ ದೊರಕಿದರೆ ರೂಪಾಂತರ ಹೊಂದುತ್ತದೆ.
ಈ ಮರೂಭೂಮಿ ಮಿಡತೆಯ (Schistocerca)
ಜೀವನ ಚಕ್ರ ಮೂರು ಹಂತಗಳಿಂದ ಕೂಡಿದೆ. ಮೊಟ್ಟೆಯಿಂದ ಹೊರಬರುವ ಸಣ್ಣ ಮಿಡತೆ ಕೀಟದ ಎಲ್ಲಾ ಲಕ್ಷಣಗಳನ್ನು ಹೊದಿರುತ್ತದೆ. ಇವುಗಳ ಜೀವನ ಚಕ್ರದಲ್ಲಿ ಲಾರ್ವ ಸ್ಥಿತಿ ಇರುವುದಿಲ್ಲ. ಮಿಡತೆ ವಯಸ್ಕ ಹಂತ ತುಲುಪಿದಾಗ ದೊಡ್ಡ ಗಾತ್ರದೊಂದಿಗೆ ರೆಕ್ಕೆಯನ್ನು ಪಡೆಯುತ್ತದೆ. ಸದಾ ಕಾಲ ಏಕಾಂಗಿ (Solitary) ಇರುವ ಈ ಕೀಟ ಆಹಾರದ ಕೊರತೆ ಅಥವಾ ಹವಾಮಾನದ ಬದಲಾವಣೆ ಇಂದಾಗಿ ಸಣ್ಣಗುಂಪುಗಳಲ್ಲಿ ಹೊಂದಾಗುತ್ತದೆ. ಮಿಡಿತೆಳಗಳ ಪರಸ್ಪರ ಸಂಪರ್ಕದಿಂದಾಗಿ ಸಿರೋಟೊನಿನ್ (Serotonin) ಹಾರ್ಮೋನ್ ಕೀಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದಾಗಿ ಇವುಗಳ ಮೆದಳು ಹಾಗೂ ದೇಹದ ಗಾತ್ರ ದೊಡ್ಡದಾಗುತ್ತದೆ. ಗುಂಪುಗಳಲ್ಲಿ ಮಿಡಿತೆಗಳು ಹೊಂದಾದಾಗ ಇವುಗಳ ಬಣ್ಣದಲ್ಲಿ ಸಹ ಬದಲಾವಣೆಯಾಗುತ್ತೆ. ಹಸಿರು ಹಾಗು ಕಂದು ಬಣ್ಣದ ಕೀಟಗಳು ಹಳದಿ ಬಣ್ಣಕ್ಕೆ ತಿರುಗಿ ಕರಿಗರೆಗಳು ಸಹ ಮೈಮೇಲೆ ಮೂಡುತ್ತವೆ. ಗುಂಪುಗಳಲ್ಲಿ ಒಂದಾಗುವಾ ಮಿಡಿತೆಗೆ ಸಿಸ್ಟೀಸೆರ್ಕಾ ಗ್ರಗೇರಿಯಾ ( Schistocerca Gregaria) ಎಂದು ಕರೆಯಲಾಗುತ್ತದೆ. ಗುಂಪುಗಳಲ್ಲಿ ಒಟ್ಟಾದಾಗ ಇವುಗಳ ಮೆಟಬಾಲಿಜಂ (Metabolism) ಹೆಚ್ಚಾಗುತ್ತದೆ. ಕೀಟಗಳಲ್ಲಿ ಫೆರೋಮನ್ (Pheromone) ಬಿಡುಗಡೆಯಾಗಿ ಆಕ್ರಮಣಶಾಲಿಗಳಾಗುತ್ತವೆ.
ಇತಿಹಾಸದ ಉದ್ದಕ್ಕೂ ಇದೆ ಮಿಡಿತೆಗಳ ದಾಳಿ
ಮಿಡತೆಗಳ ಹಾವಳಿಗಳ ಬಗ್ಗೆ ಈಜಿಪ್ಟಿನ ಪಿರಮಿಡ್
ಕ್ರೈಸ್ತ ಹಾಗೂ ಇಸ್ಲಾಂ ಧರ್ಮ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ಶತ ಶತಮಾನಗಳಿಂದಲೂ ದಾಳಿ ನಡೆಸಿ ಮನುಷ್ಯ ಬೆಳೆದ ಬೆಳೆಗಳನ್ನು ನಾಶ ಮಾಡುವ ಇವುಗಳ ಮನುಷ್ಯ ಸಂಘಟಿತನಾಗಿ ಹೋರಾಟ ಮಾಡುತ್ತಾ ಬಂದಿದ್ದಾನೆ. ಆಫ್ರಿಕಾ ಖಂಡದಲ್ಲಿ ಸಹಜವಾಗಿ ಕಂಡುಬರುವ ಈ ಮಿಡಿತೆಗಳ ಹಾವಳಿ ಇತರೆ ಆಗಾಗ ಖಂಡಗಳಲ್ಲೂ ಕಂಡು ಬಂದಿ್ದೆದೆ. 19ನೇ ಶತಮಾನದ ಕೊನೆಯ ಭಾಗದಲ್ಲಿ ಅಮೇರಿಕಾದಲ್ಲಿ ಮಿಡಿತಗಳ ಹಾವಳಿಯಾಗಿತ್ತು. 1915 ರಲ್ಲಿ ಅಟೋಮನ್ ಹಾಗೂ ಸಿರಿಯಾದಲ್ಲಿ ಮಿಡತೆಗಳ ಹಾವಳಿ ಉಲ್ಬಣಿಸಿತ್ತು. ಪಶ್ಚಿಮ ಆಫ್ರಿಕಾ ದೇಶಗಳಲ್ಲಿ 2003 ರಿಂದ 2005 ವರೆಗೆ ಇವುಗಳ ಬಾದೆ ಇತ್ತು. ಈಗ ಮತ್ತೆ ಇದೇ ದೇಶಗಳಲ್ಲಿ ಉಲ್ಬಣಿಸಿ ಇರಾನ್ , ಎಮನ್ , ಪಾಕಿಸ್ತಾನದ ಮೂಲಕ ನಮ್ಮ ದೇಶಕ್ಕೂ ಲಗ್ಗೆ ಇಟ್ಟಿವೆ. ಈ ಬಾರಿ ಅಧಿಕ ಸಂಖ್ಯೆಯಲ್ಲಿ ಹೆಚ್ಚಾಗುವುದಕ್ಕೆ 2018 ಹಾಗೂ 2019 ರಲ್ಲಿ ಹಿಂದೂ ಮಹಾಸಾಗರದಲ್ಲಿ ಉಂಟಾದ ತಾಪಮಾನ ಏರಿಕೆಯಿಂದ, ಆಫ್ರಿಕಾ ಖಂಡದಲ್ಲಿ ಹೆಚ್ಚಿನ ಮಳೆ ಬಂದು ನೆರೆ ಹಾವಳಿ ಉಂಟಾಗಿತ್ತು. ಹೆಚ್ಚಾದ ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಈ ಮಿಡಿತೆಗಳು ಮೊಟ್ಟೆಗಳನ್ನು ಇಡಲು ಸಹಾಯಕವಾಯಿತು. ಮಳೆಯಿಂದಾಗಿ ಉಂಟಾದ ಹಸಿರು ಇವುಗಳಿಗೆ ಆಹಾರ ಒದಗಿಸಿ ಅಧಿಕ ಸಂಖ್ಯೆಯಲ್ಲಿ ಇವು ಉತ್ಪತ್ತಿಯಾಗಲು ಕಾರಣವಾಗಿದೆ.
ಮಿಡಿತೆಗಳ ದಂಡಿನ ಅಗಾಧ ಶಕ್ತಿ
ಬೃಹತ್ ಪ್ರಮಾಣದಲ್ಲಿ ದಾಳಿ ಇಡುವ ಮಿಡಿತೆಗಳ ಸಂಖ್ಯೆ ಅಗಾಧವಾದುದು. ಪ್ರತಿ ಹೆಣ್ಣು ಮಿಡಿತೆ ಸರಾಸರಿ 50 ರಿಂದ 100 ಮೊಟ್ಟೆಗಳನ್ನು ಇಡಬಲ್ಲದು. ಒಂದು ದೊಡ್ಡ ಲುಕಸ್ಟ ಸ್ವಾರ್ಮ್ 1200 ಚದುರ ಕಿಲೋಮೀಟರ್ ಆವರಿಸಿಕೊಳ್ಳಬಹುದು. ಪ್ರತಿ ಚದರ ಕಿಲೋಮೀಟರ್ ನಲ್ಲಿ 4 ರಿಂದ 8 ಕೋಟಿ ಸಂಖ್ಯೆಯಲ್ಲಿ ಮಿಡತೆಗಳು ಇರಬಹದು. ಇದರ ಆಧಾರದ ಮೇಲೆ 100 ಶತ ಕೋಟಿ ಮಿಡಿತೆಗಳು ಒಂದು ಲುಕಸ್ಟ ಸ್ವಾರ್ಮ್ ಇರುತ್ತವೆ. ದಾರಿಯಲ್ಲಿ ಸಿಗುವ ಪ್ರತಿಯೊಂದು ತಿನ್ನುತ್ತಾ ಮುಂದೆ ಬರುವ ಇವುಗಳು ರೈತರ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತವೆ. ಪ್ರತಿದಿನ 100 ರಿಂದ 200 ಕಿ.ಮೀ. ಸಾಗುವ ಮಿಡೆತೆಗಳ ಗುಂಪು 2000 ಮೀಟರ್ ಎತ್ತರದ ವರೆಗೂ ಹಾರಟ ನಡೆಸಬಲ್ಲವು.
ಮಿಡಿತಗಳ ದಾಳಿ ತಡೆಗಟ್ಟುವ ಮಾರ್ಗಗಳು ಯಾವುವು?
ದಾಂಗುಡಿ ಇಡುವ ಮಿಡಿತೆಗಳನ್ನು ತಡೆಗಟ್ಟಲು ಸಶಕ್ತವಾದ ಕ್ರಮವೆಂದರೆ ಮುನ್ನೆಚ್ಚರಿಕೆ ವಹಿಸುವುದು. ಆಫ್ರಿಕಾ ಖಂಡದಲ್ಲಿನ ಮಳೆ ಹಾಗೂ ಉಷ್ಣತೆಯ ದತ್ತಾಂಶಗಳನ್ನು ಕ್ರೂಡಿಕರಿಸಿ ಇವುಗಳು ಜನ್ಮತಾಳುವುದಕ್ಕಿಂದ ಮುಂಚೆ ಇವುಗಳನ್ನು ನಾಶ ಮಾಡಬೇಕು. ಇವುಗಳು ಸಣ್ಣ ಹಂತದಲ್ಲಿ ಇದ್ದಾಗ ಇತರೆ ಕೀಟಗಳು, ಪಕ್ಷೀ, ಸರೀಸೃಪಗಳು ಇವುಗಳನ್ನು ಆಹಾರವಾಗಿ ಸೇವಿಸುತ್ತವೆ. ಈ ಪರಿಸರದ ಸಮತೋಲನವನ್ಮು ಕಾಪಾಡಿಕೊಳ್ಳಬೇಕು. ಪರಿಸರ ನಾಶ ಮಾಡದರೆ ಈ ಅಸಮತೋಲ ಉಂಟಾಗುತ್ತದೆ. ಈಗ ದಾಳಿಗಳನ್ನು ತಡೆಗಟ್ಟಲು ಸಣ್ಣ ಪ್ರಮಾಣದಲ್ಲಿ ಕ್ರಿಮಿ ನಾಶಕಗಳನ್ನು ಬಳಸಿ ಆಕಾಶದ ಮೂಲಕ ಮಿಡತೆ ಹಾವಳಿ ಪ್ರದೇಶದಲ್ಲಿ ಸಿಂಪಡಿಸಲಾಗುತ್ತದೆ. ರಾಸಾಯನಿಗಳ ಜೊತೆ ನೈಸರ್ಗಿಕ ಕೀಟನಾಶಗಳನ್ನು ಸಿಂಪಡಿಸಬಹುದು. ದೊಡ್ಡ ಸಂಖ್ಯೆಯಲ್ಲಿ ಇವುಗಳನ್ನು ಹಿಡಿದು ಸುಟ್ಟು ಹಾಕಲಾಗುತ್ತದೆ. ಅಲ್ಲದೆ ರೈತರು ಇವುಗಳನ್ನು ಹಿಡಿದು ಕೋಳಿಗಳಿಗೆ ಆಹಾರವಾಗಿ ಬಳಸಬಹುದು.
ಈಗಾಗಾಲೇ ಉತ್ತರ ಭಾರತದ ಹಲವು ರಾಜ್ಯಗಳು, ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿರುವ ಮಿಡಿತೆಗಳ ಗುಂಪು ಕರ್ನಾಟಕ ರಾಜ್ಯಕ್ಕೂ ಕಾಲಿಡುವ ಸಾಧ್ಯತೆ ಇದೆ. ಕಳೆದ ವರ್ಷ ಸೈನಿಕ ಹುಳಗಳ ಬಾದೆಯಿಂದ ನಷ್ಟ ಅನುಭವಿಸದ್ದ ರೈತರಿಗೆ ಇವು ದುಸ್ವಪ್ನವಾಗಬಹುದು. ಆದರೆ ವಿಜ್ಞಾನಿಗಳು, ಕೀಟಶಾಸ್ತ್ರಜ್ಞರು ಕೀಟಗಳ ಬಾದೆ ರಾಜ್ಯಕ್ಕೆ ಉಂಟಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ವೇಣುಗೋಪಾಲ .ಪಿ.ಎಂ.
ರಾಜ್ಯ ಸಮಾಚಾರ ಕೇಂದ್ರ ಹುಬ್ಬಳ್ಳಿ