ಪಕ್ಷಾಂತರ ನಿಷೇಧ ಕಾಯ್ದೆ ಕುರಿತ ಸಂಸದೀಯ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತು
1 min readಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಕುರಿತು ಅಭಿಪ್ರಾಯ ಸಂಗ್ರಹಿಸಲು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಂಸದೀಯ ಸಭೆಯಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವ್ಯಕ್ತಪಡಿಸಿದ ಅಭಿಪ್ರಾಯದ ಸಾರಾಂಶ:
# ಸದ್ಯ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ರಾಷ್ಟ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಎಲ್ಲ ಪಕ್ಷಕ್ಕೂ ಬಂದಿರುವ ದೊಡ್ಡ ಕಾಯಿಲೆ. ಇದನ್ನು ಈಗ ಬಗೆಹರಿಸದಿದ್ದರೇ ಇಡೀ ಪ್ರಜಾತಂತ್ರ ವ್ಯವಸ್ಥೆಯೇ ಹದಗೆಡಲಿದೆ. ಇದಕ್ಕೆ ನಮ್ಮ ರಾಜ್ಯವೇ ದೊಡ್ಡ ಸಾಕ್ಷಿಯಾಗಿದೆ. ಬದಲಾವಣೆ ತರಲು ನಾವೆಷ್ಟೇ ಪ್ರಯತ್ನ ಮಾಡಿದರೂ ಇತ್ತೀಚಿನ ದಿನಗಳಲ್ಲಿ ಈ ಪಕ್ಷಾಂತರ ವಿಚಾರಕ್ಕೆ ನಾವೆಲ್ಲರೂ ಕಾರಣಕರ್ತರಾಗಿದ್ದೇವೆ.’
# ಬೊಮ್ಮಾಯಿ ಅವರ ಪ್ರಕರಣದ ತೀರ್ಪು, ರಮೇಶ್ ಕುಮಾರ್ ಅವರ ತೀರ್ಪು, ಗೋವಾ, ಒಡಿಶಾ, ಮಣಿಪುರ, ನಾಗಾಲೆಂಡ್ ತೀರ್ಪುಗಳ ಬಗ್ಗೆ ದೊಡ್ಡ ಚರ್ಚೆ ಆಗಿದೆ. ನಾವಷ್ಟೇ ಚರ್ಚೆ ಮಾಡಿದರೆ ಸಾಲದು. ನೀವು ವಿಧಾನ ಪರಿಷತ್ ಸಭಾಪತಿಗಳನ್ನು ಒಳಗೊಂಡಂತೆ ಅಲ್ಲಿನ ಸದಸ್ಯರುಗಳ ಜತೆಯೂ ಒಂದು ಸಭೆ ನಡೆಸಬೇಕಿದೆ. ಇಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನ ಅವರಿಗೂ ಅನ್ವಯಿಸುತ್ತದೆ. ಹೀಗಾಗಿ ಈ ವಿಚಾರದಲ್ಲಿ ಅವರನ್ನು ನಾವು ಕಡೆಗಣಿಸಲು ಆಗುವುದಿಲ್ಲ. ಇದು ವ್ಯವಸ್ಥೆಯ ಭಾಗವಾಗಿದೆ.’
# ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದು, ಪಕ್ಷಾಂತರ ಮಾಡಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ವಾಪಸ್ ತೆಗೆದುಕೊಳ್ಳುವುದು, ಒಂದು ಪಕ್ಷದಲ್ಲಿದ್ದು, ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತರಲು ರಾಜೀನಾಮೆ ನೀಡುವ ಪ್ರವೃತ್ತಿಗೆ ಕಡಿವಾಣ ಹಾಕಲಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಯಾರು ಗೆಲ್ಲುತ್ತಾರೋ ಅವರು ಅಧಿಕಾರ ಪಡೆಯಲಿ, ಆದರೆ ಅಧಿಕಾರ ಹಸ್ತಾಂತರಕ್ಕೆ ಪಕ್ಷಾಂತರ ಮಾಡುವುದು ವ್ಯವಸ್ಥೆಗೆ ವಿರುದ್ಧವಾದುದು. ಇದಕ್ಕೆ ಅವಕಾಶ ನೀಡಬಾರದು. ಸ್ಪೀಕರ್ ಕುರ್ಚಿಯು ನ್ಯಾಯಾಧೀಶರ ಸ್ಥಾನದಂತೆ. ಆ ಸ್ಥಾನದಲ್ಲಿ ಕೂರುವವರು ಯಾವುದೇ ಪಕ್ಷದಿಂದ ಆಯ್ಕೆಯಾದರೂ ಅವರಿಗೆ ಇರುವ ಅಧಿಕಾರವನ್ನು ಬಳಸಲು ಅವಕಾಶ ನೀಡಬೇಕು.