Posts Slider

Karnataka Voice

Latest Kannada News

ಭೇಟಿ ಕೊಟ್ಟ ಎರಡೇ ದಿನದಲ್ಲಿ ಸಭೆ ನಡೆಸಿದ ಬೈರತಿ ಬಸವರಾಜ: ಅವಳಿನಗರದ ಅಭಿವೃದ್ಧಿಗೆ ಮುಂದು

1 min read
Spread the love

ಬೆಂಗಳೂರು: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಲಯ ನಿಯಮಾವಳಿ ಪರಿಷ್ಕರಣೆ, ಪಿಂಚಣಿ ಅನುದಾನ, ನೀರಿನ ಶುಲ್ಕದ ಬಡ್ಡಿ ಮನ್ನಾ, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ, ಪೌರ ಕಾರ್ಮಿಕರ ನೇರ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಮತ್ತು ನಗರಾಭಿವೃದ್ದಿ ಸಚಿವ ಬಿ.ಎ ಬಸವರಾಜು ನೇತೃತ್ವದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ವಲಯ ನಿಯಮಾವಳಿ ಪರಿಷ್ಕರಿಸುವ ಬಗ್ಗೆ: ಕ್ರೆಡಾಯ್‌ ಸಂಸ್ಥೆಯಿಂದ ಬಂದಂತಹ ಪ್ರತಿನಿಧಿಗಳು ಹುಬ್ಬಳ್ಳಿ ಧಾರವಾಡ ನಗರಕ್ಕೆ ಈಗಾಗಲೇ ಮಂಜೂರಾದ ವಲಯ ನಿಯಮಾವಳಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದರು. ಅದರಲ್ಲಿ ಕೆಲವೊಂದು ನ್ಯೂನತೆಗಳು ಹಾಗೂ ಲೋಪದೋಷಗಳನ್ನು ವಿವರಿಸುತ್ತಾ ಈ ಸಂಬಂಧವಾಗಿ ಸರಿಪಡಿಸಲು ಕೂಡಲೇ ತಿದ್ದುಪಡಿ ಮಾಡಲು ಅಗತ್ಯ ಕ್ರಮವನ್ನು ಒಂದು ತಿಂಗಳ ಒಳಗಾಗಿ ತಗೆದುಕೊಳ್ಳುವಂತೆ ನಗರಾಭಿವೃದ್ದಿ ಸಚಿವ ಬಿ ಎ ಬಸವರಾಜ್‌ ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆಗೆ ಸಂಬಂಧಿಸದಂತೆ ಪಿಂಚಣಿ ಅನುದಾನ: ಸರಕಾರದಿಂದ ಒಟ್ಟು ಪಿಂಚಣೀ ಅನುದಾನ 115 ಕೋಟಿ ನೀಡುವುದು ಬಾಕಿ ಇದೆ. ಈಗಾಗಲೇ 52 ಕೋಟಿಗಳ ಬಿಡುಗಡೆ ಅನುಮೋದನೆ ಆಗಿದ್ದು, ಈ ಪೈಕಿ 26 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ. ಇನ್ನು ಉಳಿದ 26 ಕೋಟಿಗಳನ್ನು ಆರ್ಥಿಕ ಇಲಾಖೆ ಯೊಂದಿಗೆ ಚರ್ಚಿಸಿ ಒಂದು ವಾರದೊಳಗೆ ಬಿಡುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಸರಕಾರದ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ಐಟಿ ಪಾರ್ಕ್‌: ಹುಬ್ಬಳ್ಳಿ ಧಾರವಾಡದ ಅಮರಗೋಳ ಪ್ರದೇಶದಲ್ಲಿ ಐ ಟಿ ಪಾರ್ಕಿಗಾಗಿ ಮೀಸಲಿಟ್ಟಿದ್ದ 25 ಎಕರೆ ಜಾಗದಲ್ಲಿ ಈಗಾಗಲೇ ಹಲವಾರು ಕಂಪನಿಗಳಿಗೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಉಳಿದ 10 ಎಕರೆ ಪ್ರದೇಶ ಇದುವರೆಗೂ ಹಂಚಿಕೆಯಾಗಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಕಾರ್ಯರ್ಶಿಗಳಿಗೆ  ಸೂಚನೆ ನೀಡಿದರು.

ನೀರಿನ ಶುಲ್ಕದ ಬಡ್ಡಿ ಮನ್ನಾ ವಿಷಯ: ನೀರಿನ ಶುಲ್ಕದ ಬಡ್ಡಿ ಮನ್ನಾ ಮಾಡುವ ವಿಷಯವಾಗಿ ಚಾಲ್ತಿ ವರ್ಷದ ನೀರಿನ ಶುಲ್ಕ ವಸೂಲಾತಿ ಜೊತೆಯಲ್ಲಿ ಚಾಲ್ತಿ ವರ್ಷದಿಂದ ಮೂರು ವರ್ಷಗಳಿಗೆ ಮಾತ್ರ ಬಡ್ಡಿಯನ್ನು ವಸೂಲಿ ಮಾಡುವ ಸಂಬಂಧ ಪರಿಶೀಲನೆ ನಡೆಸಿ ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೈಗಾರಿಕೆಗಳೀಗೆ ಸಂಬಂಧಪಟ್ಟಂತಹ ಆಸ್ತಿ ತೆರಿಗೆ ವಸೂಲಿ ಮಾಡುವ ಕುರಿತು: ರಾಜ್ಯದಲ್ಲಿ ಕೈಗಾರಿಕೆಗಳಿಗೆ ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ವತಿಯಿಂದ ಆಸ್ತಿ ತೆರಿಗೆ ಪಾವತಿಸಲು ಬೇಡಿಕೆ ನೋಟಿಸ್‌ ನೀಡಲಾಗುತ್ತಿದೆ. ಈಗಾಗಲೇ ಕೈಗಾರಿಕೆಗಳು ಸಂಕಷ್ಟದ ಪರಿಸ್ಥಿತಿಯಲ್ಲಿರುವುದರಿಂದ ಆಸ್ತಿ ತೆರಿಗೆ ಬಗ್ಗೆ ಸೂಕ್ತ ತೆರಿಗೆ ವಿಧಿಸುವ ನಿಟ್ಟಿನಲ್ಲಿ, ಕಾಯ್ದೆಯಲ್ಲಿ ಸೂಕ್ತ ಬದಲಾವಣೆ ಮಾಡಲು ಕ್ಯಾಬಿನೆಟ್‌ ಗೆ ನೋಟ್‌ ನೀಡುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ ಶೆಟ್ಟರ ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ನಾಗಶೆಟ್ಟಿಕೊಪ್ಪ ಮತ್ತು ಹಳೇಹುಬ್ಬಳ್ಳಿಯಲ್ಲಿ ಈಗಾಗಲೇ ಹಂಚಿಕೆ ಮಾಡಲಾದ ನಿವೇಶನ ದಾರರಿಗೆ ಹಕ್ಕುಪತ್ರ ನೀಡುವ ಸಂಬಂಧ ಕಾನೂನಾತ್ಮಕವಾಗಿ ಪರಿಶೀಲಿಸಿ ಕೂಡಲೇ ಕ್ರಮವಹಿಸಲು ಸೂಚನೆ ನೀಡಲಾಯಿತು.

ಪೌರ ಕಾರ್ಮಿಕರ ನೇರ ನೇಮಕಾತಿ: ಪೌರ ಕಾರ್ಮಿಕರ ನೇರ ನೇಮಕಾತಿ ವಿಷಯವಾಗಿ ಪಾಲಿಕೆಯಲ್ಲಿ ಅವಶ್ಯಕತೆ ಇರುವ ಘನತ್ಯಾಜ್ಯ ನಿರ್ವಹಣೆಗಾಗಿ ಲೋಡರ್ಸ್‌, ಕ್ಲೀನರ್ಸ್‌, ಡ್ರೈವರ್ಸ್‌, ಮತ್ತು ಸಹಾಯಕರು ಈ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಆಯುಕ್ತರು ಮಹಾನಗರ ಪಾಲಿಕೆ ಹುಬ್ಬಳ್ಳಿ ಇವರಿಗೆ ಸೂಚನೆ ನೀಡಿದರು.  ಇದೇ ವೇಳೆ, ಆಯುಕ್ತರು ನೀಡುವ ವರದಿಯನ್ನು ನಿರ್ಧೇಶಕರು ಪೌರಡಾಳಿತ ನಿರ್ದೇಶನಾಲಯರವರು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಸೂಚನೆ ನೀಡಿದರು.

ಕೈಗಾರಿಕಾ ವಸಹಾತು ವಿಷಯ: ಬೆಂಗಳೂರಿನ ಪೀಣ್ಯ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಮಾದರಿಯಲ್ಲಿ ಹುಬ್ಬಳ್ಳೀ  ಧಾರವಾಡ ವ್ಯಾಪ್ತಿಯಲ್ಲಿ ಕೈಗಾರಿಕಾ ವಸಹಾತುಗಳಿಗೆ ಶೇಕಡಾ 70 ಮತ್ತು 30 ರ ಪರಿಮಾಣದಲ್ಲಿ ನಿರ್ವಹಣೆಯ ಜವಾಬ್ದಾರಿಯ ಅನುಮತಿ ನೀಡುವ ಸಂಬಂಧ ಕಾನೂನಾತ್ಮಕವಾಗಿ ಪರಿಶೀಲಿಸಲು ಸೂಚನೆ ನೀಡಲಾಯಿತು.

ಮಹಾನಗರ ಪಾಲಿಕೆಯ 2736 ಆಸ್ತಿಗಳಿಗೆ ಹಾಗೂ ಸ್ವತ್ತುಗಳಿಗೆ ಭೂಬಾಡಿಗೆ ವಿಷಯವಾಗಿ ಚರ್ಚಿಸಲಾಯಿತು. ಗುತ್ತಿಗೆ ಅವಧಿಯನ್ನು ಮುಂದುವರೆಸಲು, ಬಾಡಿಗೆ ದರವನ್ನು ನಿಗದಿಪಡಿಸಲು ಮತ್ತು  ಸ್ವತ್ತುಗಳನ್ನು ವಿಲೇವಾರಿ ಮಾಡಲು ರಾಜ್ಯಾದ್ಯಂತ ಅನ್ವಯವಾಗುವಂತೆ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರುವಂತೆ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಿಗೆ ನಗರಾಭಿವೃದ್ದಿ ಸಚಿವ ಬಿ ಎ ಬಸವರಾಜ್‌ ಸೂಚನೆ ನೀಡಿದರು.

ನಗರ ಯೋಜನಾ ಪ್ರಾಧಿಕಾರ: ಮೂಲೆ ನಿವೇಶನ ಹಾಗೂ ಸಿಎ ಸೈಟ್‌ಗಳಿಗೆ ದರ ನಿಗದಿ ಸಂಬಂಧ ರಿಯಾಯತಿ ನೀಡಲು ಪರಿಶೀಲಿಸಿ ಕ್ರಮ ವಹಿಸಲು ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಯಿತು.

ನವಲೂರು ರಸ್ತೆ ಅಗಲೀಕರಣ ಮತ್ತು ಸೇತುವೆ ನಿರ್ಮಾಣ: ಕೆ ಆರ್ ಡಿ ಸಿ ಎಲ್‌ ನೀಡಿರುವ ತಾಂತ್ರಿಕ ನಕ್ಷೆಗಳನ್ನು ಹಾಗೂ ವರದಿಯ ಅನ್ವಯ 15 ದಿನಗಳ ಒಳಗಾಗಿ ಪರಿಶೀಲಿಸಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಯಿತು.

ಮಹಾನಗರ ಪಾಲಿಕೆ ಘನತ್ಯಾಜ್ಯ ವಸ್ತು ನಿರ್ವಹಣೆ: ಮಹಾನಗರ ಪಾಲಿಕೆ ಘನತ್ಯಾಜ್ಯ ವಸ್ತು ನಿರ್ವಹಣೆಗೆ ವರ್ಸಟೈಲ್‌ ಕಂಪನಿ ಪ್ರತಿನಿಧಿ ಪ್ರಾತ್ಯಕ್ಷಿಕೆ ನೀಡಿದರು. ಇದಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟ ಎಲ್ಲಾ ಇಲಾಖೆ ಮುಖ್ಯಸ್ಥರೊಂದಿಗೆ ಪರಿಶೀಲಿಸಿ, ಈ ಬಗ್ಗೆ ಕೂಡಲೇ ಕ್ರಮ ವಹಿಸುವಂತೆ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶಕರು ಹಾಗೂ ಆಯುಕ್ತರಿಗೆ ಸೂಚನೆ ನೀಡಲಾಯಿತು.

ಹುಬ್ಬಳ್ಳಿ ಧಾರವಾಡ ಸಮಗ್ರ ಒಳಚರಂಡಿ ಯೋಜನೆಗಾಗಿ ಪಾಲಿಕೆಯ 492.91 ಕೋಟಿ ಅಂದಾಜು ಪಟ್ಟಿಗೆ ಅನುಮೋದನೆ ನೀಡುವಂತೆ ಕಾರ್ಯದರ್ಶಿಯವರಿಗೆ ಸೂಚನೆ ನೀಡಲಾಯಿತು. ಅದಕ್ಕಾಗಿ ಪಾಲಿಕೆ 73 ಕೋಟಿ ರೂಪಾಯಿಗಳ ವಂತಿಗೆ ಭರಿಸಲು ಒಪ್ಪಿಗೆ ಪತ್ರ ನೀಡಲು ಕಾರ್ಯದರ್ಶಿಯವರು ಆಯುಕ್ತರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕ ಅರವಿಂದ್‌ ಬೆಲ್ಲದ್‌, ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಶಂಕರ್‌, ನಿರ್ದೇಶಕರು ನಗರ ಯೋಜನಾ ಇಲಾಖೆ ಶಶಿಕುಮಾರ್‌, ಬಿ ಬಿ ಕಾವೇರಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಕೆ ಯು ಐ ಡಿ ಎಫ್‌ ಸಿ ಎಂ ಡಿ ಚಾರುಲತಾ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ ಸುರೇಶ್‌ ಇಟ್ನಾಳ್‌, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ ಎಂಡಿ ಶಕೀಲ್‌ ಅಹ್ಮದ್‌ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.


Spread the love

Leave a Reply

Your email address will not be published. Required fields are marked *